ಪೊಲೀಸ್ ಬೊಲೆರೋ ಟೈರ್ ಸ್ಪೋಟ; ಕರ್ತವ್ಯಕ್ಕೆ ಹಾಜರಾಗುವ ಮುನ್ನವೇ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಐಪಿಎಸ್ ಅಧಿಕಾರಿ!

ಹಾಸನ: ಟೈರ್ ಸ್ಫೋಟಗೊಂಡು ಚಾಲಕನ ನಿಯಂತ್ರಣ ತಪ್ಪಿದ ಪೊಲೀಸ್‌‍ ಜೀಪ್‌ ರಸ್ತೆ  ಪಕ್ಕದ ಮನೆಗೆ ಡಿಕ್ಕಿ ಹೊಡೆದ ಪರಿಣಾಮ ಇಂದಷ್ಟೇ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎದುರು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಪೊಲೀಸ್ ಅಕಾಡೆಮಿಯಿಂದ ಆಗಮಿಸುತ್ತಿದ್ದ ಪ್ರೋಬೆಷನರಿ ಐಪಿಎಸ್‌‍ ಅಧಿಕಾರಿ ಗಂಭೀರ ಗಾಯಗೊಂಡಿರುವ ಘಟನೆ ಹಾಸನ-ಮೈಸೂರು ಹೆದ್ದಾರಿಯ ಕಿತ್ತಾನೆ ಗಡಿ ಬಳಿ ಭಾನುವಾರ ನಡೆದಿದೆ.

ಮಹಾರಾಷ್ಟ್ರ ಮೂಲದ ಕರ್ನಾಟಕ ಕೇಡರ್ ಗೆ ಆಯ್ಕೆಯಾಗಿರುವ ಪ್ರೊಬೇಷನರಿ ಐಪಿಎಸ್‌‍ ಅಧಿಕಾರಿ ಹರ್ಷವರ್ಧನ್ ಗಂಭೀರವಾಗಿ ಗಾಯಗೊಂಡಿದ್ದು. ಅವರು ಪ್ರಯಾಣಿಸುತ್ತಿದ್ದ ಜೀಪ್‌ ಚಾಲಕ, ಹಾಸನದ ಡಿಎಆರ್‌ ಕಾನ್ ಸ್ಟೇಬಲ್ ಮಂಜೇಗೌಡ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಇಬ್ಬರನ್ನೂ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅವಘಡದಲ್ಲಿ ಜೀಪ್ ಸಂಪೂರ್ಣ ಜಖಂಗೊಂಡಿದೆ. ಹರ್ಷವರ್ಧನ್ ಅವರು ಮೈಸೂರಿನ ಪೊಲೀಸ್ ತರಬೇತಿ ಅಕಾಡೆಮಿಯಲ್ಲಿನ ತರಬೇತಿ ನಂತರ ಫೀಲ್ಡ್ ಟ್ರೈನಿಂಗ್ ಗಾಗಿ ಹೊಳೆನರಸೀಪುರ ಡಿವೈಎಸ್ಪಿಯಾಗಿ ಕಾರ್ಯನಿರ್ವಹಣೆ ಆರಂಭಿಸಬೇಕಾಗಿತ್ತು.

ಇದಕ್ಕಾಗಿ ಅವರನ್ನು ಕರೆತರಲು ಮಂಜೇಗೌಡ ಹಾಸನ ಗ್ರಾಮಾಂತರ ಠಾಣೆಯ ಇನ್ಸ್ ಪೆಕ್ಟರ್ ಬೊಲೆರೋ ವಾಹನವನ್ನು ಮೈಸೂರಿಗೆ ತೆಗೆದುಕೊಂಡು ಹೋಗಿ ಅಧಿಕಾರಿಯನ್ನು ಹಾಸನಕ್ಕೆ ಕರೆತರುವಾಗ ಅವಘಡ ಸಂಭವಿಸಿದೆ.