ಇಂಡೋ-ಪಾಕ್ ಮಧ್ಯಸ್ಥಿಕೆ ನಂತರ ಅಮೆರಿಕಾ ಅಧ್ಯಕ್ಷರಿಗೆ ಹೊಸ ಆಹ್ವಾನ: ಈಜಿಪುರ ಫ್ಲೈ ಓವರ್ ಗೆ ‘ಮಗಾ ಡೊನಾಲ್ಡ್ ಟ್ರಂಪ್’ ಎಂದು ನಾಮಕರಣ ಮಾಡುವ ಆಮಿಷ ಫುಲ್ ವೈರಲ್

ಬೆಂಗಳೂರು, ಮೇ 12, 2025:ಭಾರತ-ಪಾಕಿಸ್ತಾನ ಗಡಿ ಉದ್ವಿಗ್ನತೆಯ ನಂತರ ಟ್ರಂಪ್ ಶಾಂತಿ ಸ್ಥಾಪನೆಗೆ ಮಧ್ಯಸ್ಥಿಕೆ ವಹಿಸಿದ್ದನ್ನು ಅಣಕಿಸಿ ಬೆಂಗಳೂರಿನ ಎಕ್ಸ್ ಖಾತೆದಾರರೊಬ್ಬರು ಮಾಡಿರುವ ಪೋಸ್ಟ್ ಈಗ ವೈರಲ್ ಆಗಿದೆ.

ಬೆಂಗಳೂರಿನ ಈಜಿಪುರ ಫ್ಲೈ ಓವರ್ ನಿರ್ಮಾಣ ಕಾಮಗಾರಿಯ ದೀರ್ಘಕಾಲದ ವಿಳಂಬದಿಂದ ಕಂಗಾಲಾದ ಸ್ಥಳೀಯ ನಿವಾಸಿಯೊಬ್ಬರು, ಈ ಸಮಸ್ಯೆಯನ್ನು ಬಗೆಹರಿಸಲು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಮಧ್ಯಸ್ಥಿಕೆ ವಹಿಸುವಂತೆ ಆಹ್ವಾನಿಸಿ ಸಾಮಾಜಿಕ ಜಾಲತಾಣ Xನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿನೂತನ ಮನವಿಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೇ 10, 2025ರಂದು, @BengaluruRains_ ಎಂಬ X ಖಾತೆಯಿಂದ ಪೋಸ್ಟ್ ಮಾಡಲಾದ ಟ್ವೀಟ್‌ನಲ್ಲಿ, ಈಜಿಪುರ ಫ್ಲೈ ಓವರ್ ಕಾಮಗಾರಿಯನ್ನು ತ್ವರಿತಗೊಳಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಜೊತೆಗೆ ಮಧ್ಯಸ್ಥಿಕೆ ನಡೆಸುವಂತೆ ಟ್ರಂಪ್‌ರಿಗೆ ವಿನಂತಿಸಲಾಗಿದೆ.

ಜೊತೆಗೆ, ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL)ನಿಂದ ‘ನಮ್ಮ ಮೆಟ್ರೋ’ದ ಯೆಲ್ಲೋ ಲೈನ್ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಕೋರಲಾಗಿದೆ. ಹಾಸ್ಯಮಿಶ್ರಿತ ಈ ಪೋಸ್ಟ್‌ನಲ್ಲಿ, ಕಾಮಗಾರಿ ಪೂರ್ಣಗೊಂಡರೆ ಫ್ಲೈ ಓವರ್‌ಗೆ ‘MAGA ಟ್ರಂಪ್ ಫ್ಲೈ ಓವರ್’ ಎಂದು ನಾಮಕರಣ ಮಾಡುವ ಆಮಿಷವನ್ನೂ ಒಡ್ಡಲಾಗಿದೆ.

ಈಜಿಪುರ ಫ್ಲೈ ಓವರ್ ಸಮಸ್ಯೆ:
ಕೊರಮಂಗಲ, ಎಚ್‌ಎಸ್‌ಆರ್ ಲೇಔಟ್ ಮತ್ತು ಸಿಲ್ಕ್ ಬೋರ್ಡ್‌ನಂತಹ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸುವ ಈಜಿಪುರ ಫ್ಲೈ ಓವರ್, ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಗುರಿಯೊಂದಿಗೆ ಕೈಗೊಳ್ಳಲಾದ ಯೋಜನೆಯಾಗಿದೆ. ಆದರೆ, ಭೂಸ್ವಾಧೀನ ಸಮಸ್ಯೆಗಳು, ಗುತ್ತಿಗೆದಾರರ ಆರ್ಥಿಕ ತೊಂದರೆಗಳು ಮತ್ತು ತಾಂತ್ರಿಕ ಸವಾಲುಗಳಿಂದಾಗಿ ಕಾಮಗಾರಿಯು ವರ್ಷಗಟ್ಟಲೆ ವಿಳಂಬವಾಗಿದೆ. ಇದರಿಂದ ಸ್ಥಳೀಯ ನಿವಾಸಿಗಳು ಮತ್ತು ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಸಾರ್ವಜನಿಕರ ಕಳವಳ ಮತ್ತು ಪ್ರತಿಕ್ರಿಯೆ:
ಈ ಪೋಸ್ಟ್ ವೈರಲ್ ಆದ ನಂತರ, ಹಲವರು ಈಜಿಪುರ ಫ್ಲೈ ಓವರ್ ವಿಳಂಬದ ಬಗ್ಗೆ ತಮ್ಮ ಅಸಮಾಧಾನವನ್ನು Xನಲ್ಲಿ ವ್ಯಕ್ತಪಡಿಸಿದ್ದಾರೆ.  ಉದ್ಯಮಿ ಟಿ.ವಿ. ಮೋಹನ್‌ದಾಸ್ ಪೈ ಅವರು, ಈ ಪೋಸ್ಟ್‌ನ್ನು ಉಲ್ಲೇಖಿಸಿ, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಹಿಂದುಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಈ ವಿನಂತಿಯು ಭಾರತ-ಪಾಕಿಸ್ತಾನ ಗಡಿ ಉದ್ವಿಗ್ನತೆಯ ನಂತರ ಟ್ರಂಪ್ ಶಾಂತಿ ಸ್ಥಾಪನೆಗೆ ಮಧ್ಯಸ್ಥಿಕೆ ವಹಿಸಿದ್ದ ಘಟನೆಯನ್ನು ಉಲ್ಲೇಖಿಸಿ ಅಣಕ ಪೋಸ್ಟ್ ರೂಪದಲ್ಲಿ ಮಾಡಲಾಗಿದೆ.