ಗ್ರಾಹಕನ ನೆಪದಲ್ಲಿ ಬಂದವ ಗಲ್ಲಪೆಟ್ಟಿಗೆ ಮುರಿದು‌ 2 ಲಕ್ಷ ರೂ. ದೋಚಿದ!

ಹಾಸನ: ವ್ಯಾಪಾರ ಮಾಡುವ ನೆಪದಲ್ಲಿ ಅಂಗಡಿಗೆ ಬಂದ ವ್ಯಕ್ತಿ ಮಾಲೀಕನನ್ನು ಯಾಮಾರಿಸಿ ಗಲ್ಲಾ ಪೆಟ್ಟಿಗೆ ಬೀಗ ಮುರಿದು 2 ಲಕ್ಷ ರೂ. ನಗದು ದೋಚಿ ಪರಾರಿಯಾಗಿರುವ ಘಟನೆ ಬೇಲೂರು ತಾಲೂಕು ಹಗರೆಯಲ್ಲಿ ನಡೆದಿದೆ.

ಹಗರೆಯ ಸಿದ್ದಲಿಂಗೇಶ್ವರ ಟ್ರೇಡರ್ಸ್ ಕೀಟನಾಶಕ ಅಂಗಡಿಗೆ ಚೀಲ ಕೊಳ್ಳುವ ನೆಪದಲ್ಲಿ ಬಂದ ಅಪರಿಚಿತ ವ್ಯಕ್ತಿ ಮೊದಲು ಇಪ್ಪತ್ತು ಚೀಲ ಕೊಂಡು ಕೊಂಡು ಹಣ ನೀಡಿದ್ದಾನೆ.

ನಂತರ ಮತ್ತೆ ನೂರೈವತ್ತು ಚೀಲ ಬೇಕೆಂದು ಕೇಳಿದ್ದಾನೆ. ಅಷ್ಟು ಚೀಲ ಅಂಗಡಿಯಲ್ಲಿ ದಾಸ್ತಾನಿಲ್ಲದ ಕಾರಣಕ್ಕಾಗಿ ಪಕ್ಕದ ಮಳಿಗೆಯಿಂದ ಚೀಲ ಇರುವುದಾಗಿ ತಿಳಿಸಿದ ಮಾಲೀಕ ಶಿವಣ್ಣ ನೂರೈವತ್ತು ಚೀಲದ ಹಣ ಪಡೆದು ಚೀಲ ತರುವುದಾಗಿ ಅನತಿ ದೂದಲ್ಲಿರುವ ಮಳಿಗೆಗೆ ಹೋಗಿದ್ದಾರೆ.

ಆ ಸಮಯವನ್ನೇ ಕಾಯುತ್ತಿದ್ದ ವ್ಯಕ್ತಿ ಗಲ್ಲಪೆಟ್ಟಿಗೆಯನ್ನು ಕಬ್ಬಿಣದ ಸರಳಿನಿಂದ ಮೀಟಿ ಬೀಗವನ್ನು ಹೊರ ತೆಗೆದು ಎರಡು ಲಕ್ಷ ರೂ.ಗೂ ಹೆಚ್ಚು ಹಣವನ್ನು ದೋಚಿ ಪರಾರಿಯಾಗಿದ್ದಾನೆ.

ಮಾಲೀಕ ಚೀಲ ತೆಗೆದುಕೊಂಡು ಬಂದು ನೋಡಿದಾಗ ಹಣ ಕಳುವಾಗಿರುವುದು ಕಂಡು ಬಂದಿದ್ದು ಕೂಡಲೇ ಬೈಕ್ ನಲ್ಲಿ ತೆರಳಿ ದುಷ್ಕೃತ್ಯ ಎಸಗಿದ ವ್ಯಕ್ತಿಯನ್ನು ಹುಡುಕಾಡಿದ್ದಾರೆ. ಆದರೆ ಆ ವ್ಯಕ್ತಿಯ ಸುಳಿವು ಸಿಕ್ಕಿಲ್ಲ. ಈ ಬಗ್ಗೆ ಶಿವಣ್ಣ ಹಗರೆ ಪೊಲೀಸ್ ಉಪ ಠಾಣೆಗೆ ದೂರು ನೀಡಿದ್ದಾರೆ.