ವಾಕಿಂಗ್ ಮಾಡುತ್ತಿದ್ದ ಪಾರ್ಶ್ವವಾಯು ಪೀಡಿತನ ಮೇಲೆ ಬೀಡಾಡಿ ಹೋರಿ ಕರು ದಾಳಿ; ವ್ಯಕ್ತಿ ಸ್ಥಳದಲ್ಲೇ ಸಾವು

ಹಾಸನ: ವಾಕಿಂಗ್ ಮಾಡುತ್ತಿದ್ದಾಗ ಬೀಡಾಡಿ ಹೋರಿ ಕರು ತಿವಿದು ಪಾರ್ಶ್ವವಾಯು ಪೀಡಿತ ವ್ಯಕ್ತಿಯೊಬ್ಬ ಸಾವಿಗೀಡಾದ ಘಟನೆ ಬೇಲೂರು ತಾಲ್ಲೂಕಿನ, ಅರೇಹಳ್ಳಿಯ ದೇವಸ್ಥಾನ ಬೀದಿಯಲ್ಲಿ ನಡೆದಿದೆ.

ಏಕಾಧರ (62) ಹೋರಿ ತಿವಿತಕ್ಕೊಳಕ್ಕಾಗಿ ಸಾವನ್ನಪ್ಪಿದ ವ್ಯಕ್ತಿ.

 

ಪಾರ್ಶ್ವವಾಯು ಪೀಡಿತರಾಗಿದ್ದ ಅವರು ಮನೆ ಹಿಂದೆ ವಾಕ್ ಮಾಡುತ್ತಿದ್ದ ವೇಳೆ ದಾಳಿ ಮಾಡಿದ ಬೀಡಾಡಿ ಹೋರಿಕರು ಎದೆ, ತಲೆ, ಮುಖದ ಭಾಗಕ್ಕೆ ತಿವಿದಿದೆ.

ಇದರಿಂದ ತೀವ್ರವಾಗಿ ಗಾಯಗೊಂಡ ಅವರು ತೀವ್ರ ರಕ್ತಸ್ರಾವಕ್ಕೊಳಗಾಗಿ ಸ್ಥಳದಲ್ಲೇ ಮೃತರಾದರು. ಬೆಳಗ್ಗೆಯಿಂದ ನಾಲ್ಕೈದು ಜನರ ಮೇಲೆ ದಾಳಿ ಮಾಡಿದ್ದ ಹೋರಿಕರುವಿನಿಂದ ಜನರು ಓಡಿ ಬಚಾವಾಗಿದ್ದರು. ಆದರೆ ಪಾರ್ಶ್ವವಾಯುಪೀಡಿತರಾಗಿದ್ದ ಏಕಾಧರ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಬಲಿಯಾಗಿದ್ದಾರೆ.

ಸ್ಥಳಕ್ಕೆ ಅರೇಹಳ್ಳಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ದಾಳಿ ಮಾಡಿದ ಹೋರಿಯನ್ನು ಸ್ಥಳೀಯರು ಕಟ್ಟಿಹಾಕಿದ್ದಾರೆ.