ಹಾಸನ: ಅಪ್ರಾಪ್ತ ಬಾಲಕನ ಬುಲೆಟ್ ಬೈಕ್ ಚಲಾಯಿಸುವ ಕ್ರೇಜ್ ಚನ್ನರಾಯಪಟ್ಟಣದಲ್ಲಿ ಮಾಲೀಕನಿಗೆ ದುಬಾರಿಯಾಗಿ ಪರಿಣಮಿಸಿದೆ.
ಹೌದು, ಅಪ್ರಾಪ್ತ ಬಾಲಕನಿಗೆ ಬುಲೆಟ್ ಬೈಕ್ ಚಲಾಯಿಸಲು ನೀಡಿದ ತಪ್ಪಿಗೆ ಬೈಕ್ ಮಾಲೀಕನಿಗೆ ಚನ್ನರಾಯಪಟ್ಟಣದ ನ್ಯಾಯಾಲಯ ಮಂಗಳವಾರ 25 ಸಾವಿರ ರೂ. ದಂಡ ವಿಧಿಸಿದೆ. ಅಲ್ಲದೇ ಅಪ್ರಾಪ್ತರಿಗೆ ಬೈಕ್ ಚಲಾಯಿಸಲು ಅವಕಾಶ ನೀಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಎಚ್ಚರಿಕೆ ನೀಡಿದೆ.

ಘಟನೆ ವಿವರ:
ಇಂದು ಚನ್ನರಾಯಪಟ್ಟಣದಲ್ಲಿ ಗಸ್ತಿನಲ್ಲಿದ್ದ ಪಿಎಸ್ಐ ಮಲ್ಲಪ್ಪ ನವೋದಯ ವೃತ್ತದಿಂದ ಕೆ.ಆರ್.ವೃತ್ತದ ಕಡೆಗೆ ಅಪ್ರಾಪ್ತನೊಬ್ಬ ಬುಲೆಟ್ ಬೈಕ್ ಚಲಾಯಿಸಿಕೊಂಡು ಬರುತ್ತಿರುವುದನ್ನು ಕಂಡು ಆತನನ್ನು ತಡೆದು ದಾಖಲೆಗಳ ತಪಾಸಣೆ ನಡೆಸಿದರು.
ಆಗ ಬೈಕ್ ಹೊಳೆನರಸೀಪುರ ತಾಲೂಕಿನ ಹುಲಿವಾಲ ಗ್ರಾಮದ ನಿಖಿತ್ ಎಂಬವರಿಗೆ ಸೇರಿದ್ದು, ಬೈಕ್ ಸವಾರ ಅಪ್ತಾಪ್ತ ಎನ್ನುವುದು ಕಂಡು ಬಂದಿತು. ಹೀಗಾಗಿ ಅವರು ಬೈಕ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದರು.
ವಿಷಯ ತಿಳಿದ ಬೈಕ್ ಮಾಲೀಕ ನ್ಯಾಯಾಲಯಕ್ಕೆ ಹಾಜರಾಗಿ ದಂಡಪಾವತಿಸಿದರು.
ಲಿಪಿಕಾರರ ಯಡವಟ್ಟು:
ನ್ಯಾಯಾಲಯದಲ್ಲಿ ದಂಡ ಕಟ್ಟಿಸಿಕೊಂಡ ಸಿಬ್ಬಂದಿ ರಸೀದಿಯಲ್ಲಿ ನಾಳೆಯ ದಿನಾಂಕ 19/03/2025 ಎಂದು ನಮೂದಿಸಿದ್ದಾರೆ. ರಸೀದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಚರ್ಚೆಗೆ ಗ್ರಾಸವಾಗಿದೆ.