ಹಾಸನ: ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಡೆಂಗ್ಯೂ ಸೋಂಕಿತ ವೈದ್ಯಕೀಯ ವಿದ್ಯಾರ್ಥಿ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ.
ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಎಂಬಿಬಿಎಸ್ ವಿದ್ಯಾರ್ಥಿ, ಹೊಳೆನರಸೀಪುರ ತಾಲ್ಲೂಕಿನ, ಹಳ್ಳಿಮೈಸೂರು ಹೋಬಳಿ, ಗೋಹಳ್ಳಿ ಗ್ರಾಮದ ರೇಖಾ ಮತ್ತು ಮಂಜುನಾಥ್ ದಂಪತಿಯ ಪುತ್ರ ಕುಶಾಲ್ (22) ಸಾವನ್ನಪ್ಪಿದ ಯುವಕ.
ಡೆಂಗ್ಯೂ ಸೋಂಕಿತನಾಗಿ ಜ್ವರದಿಂದ ಬಳಲುತ್ತಿದ್ದ ವೈದ್ಯಕೀಯ ವಿದ್ಯಾರ್ಥಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಗುಣವಾಗದ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಹಿಂದೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚೇತರಿಕೆ ಕಾಣದೆ ಕಳೆದ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಕುಶಾಲ್ ತಾಯಿ, ಟೈಲರ್ ವೃತ್ತಿಯಲ್ಲಿರುವ ರೇಖಾ ಅವರೂ ಶಂಕಿತ ಡೆಂಗ್ಯೂವಿನಿಂದ ಬಳಲುತ್ತಿದ್ದು ಪುತ್ರ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಲ್ಲೇ ಒಳರೋಗಿಯಾಗಿ ದಾಖಲಾಗಿದ್ದಾರೆ.