ಹಾಸನ: ಚನ್ನರಾಯಪಟ್ಟಣ ತಾಲ್ಲೂಕಿನ, ನಾಗಯ್ಯನಕೊಪ್ಪಲು ಗ್ರಾಮದಲ್ಲಿ ವಿವಾಹಿತೆ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು, ಪತಿಯೇ ಕೊಲೆ ಮಾಡಿದ್ದಾನೆಂದು ಮೃತಳ ಪೋಷಕರು ಆರೋಪಿಸಿದ್ದಾರೆ.
ಸುರಭಿ (24) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಮಹಿಳೆ. ಮೂರು ವರ್ಷದ ಹಿಂದೆ ನಾಗಯ್ಯನಕೊಪ್ಪಲು ಗ್ರಾಮದ ದರ್ಶನ್ ಜತೆ ಹುಣಸೂರಿನ ಸುರಭಿ ಅವರ ವಿವಾಹ ಜರುಗಿತ್ತು.
ನಿನ್ನೆ ಮನೆಯಲ್ಲಿಯೇ ಅವರು ಸಾವನ್ನಪ್ಪಿದ್ದು, ನಿಮ್ಮ ಮಗಳು ಲೋ ಬಿಪಿಯಾಗಿ ಮೃತಪಟ್ಟಿದ್ದಾಳೆ ಎಂದು ಸುರಭಿ ಪೋಷಕರಿಗೆ ಪತಿ ದರ್ಶನ್ ಕರೆ ಮಾಡಿದ್ದ.
ಆದರೆ ಆತ ನೀಡಿದ ಕಾರಣ ಒಪ್ಪದ ಪೋಷಕರು ಸುರಭಿಯನ್ನು ದರ್ಶನ್ನೇ ಕೊಲೆ ಮಾಡಿದ್ದಾನೆ. ಆತನಿಗೆ ಬೇರೊಬ್ಬರ ಜತೆ ಅಕ್ರಮ ಸಂಬಂಧವಿತ್ತು. ಇದನ್ನು ಪ್ರಶ್ನಿಸುತ್ತಿದ್ದ ತಮ್ಮ ಮಗಳನ್ನು ನೇಣುಬಿಗಿದು ಕೊಲೆ ಮಾಡಿ ನಾಟವಾಡುತ್ತಿದ್ದಾನೆ ಎಂದು ಪೋಷಕರು ಆರೋಪಿಸಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಶ್ರವಣಬೆಳಗೊಳ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.