ಹಾಸನ: ಬೇಲೂರು ತಾಲ್ಲೂಕಿನ ಅರೇಹಳ್ಳಿ ಗ್ರಾಮದ ಇಂದಿರಾನಗರದಲ್ಲಿ ನಿನ್ನೆ ಸಂಜೆ ಭಾರಿ ಆತಂಕಕಾರಿ ವಿದ್ಯುತ್ ಅವಘಡ ನಡೆದಿದೆ.
ಹಲವು ದಿನಗಳಿಂದ ನಿರಂತರ ವಿದ್ಯುತ್ ಕಡಿತದಿಂದ ಪರದಾಡುತ್ತಿದ್ದ ಈ ಬಡಾವಣೆಯಲ್ಲಿ, 25 ಕೆವಿ ಟ್ರಾನ್ಸ್‌ಫಾರ್ಮರ್ ಅತಿಯಾದ ಲೋಡ್ ಕಾರಣದಿಂದ ಹೊತ್ತಿ ಉರಿದಿದ್ದು, ಭಾರೀ ಅನಾಹುತ ತಪ್ಪಿದೆ.
ಸಮಸ್ಯೆ ಪರಿಶೀಲನೆ ವೇಳೆ ಬೆಂಕಿಗಾಹುತಿಯಾದ ಟ್ರಾನ್ಸ್‌ಫಾರ್ಮರ್:
ಬಡಾವಣೆಯಲ್ಲಿ ಸರಿಯಾಗಿ ವಿದ್ಯುತ್ ಪೂರೈಕೆ ಇಲ್ಲ ಎಂಬ ಕುರಿತು ದೂರಿನ ಹಿನ್ನೆಲೆಯಲ್ಲಿ, ಪವರ್‌ಮೆನ್ ಸುಭಾಷ್ ಸ್ಥಳೀಯರೊಂದಿಗೆ ಸಮಸ್ಯೆ ಪರಿಶೀಲಿಸುತ್ತಿದ್ದ ವೇಳೆ ಈ ದುರಂತ ನಡೆದಿದೆ.
ಆಕಸ್ಮಿಕವಾಗಿ ಟ್ರಾನ್ಸ್‌ಫಾರ್ಮರ್‌ನಲ್ಲಿ ಹೊತ್ತಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಆವರಿಸಿತು. ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳದಲ್ಲಿ ಇದ್ದವರು ಭೀತಿಯಿಂದ ಓಡಿದ ಪರಿಣಾಮ ದೊಡ್ಡ ಅನಾಹುತ ತಪ್ಪಿದಂತಾಯಿತು.
ಅಧಿಕಾರಿಗಳ ನಿರ್ಲಕ್ಷ್ಯ – ಸ್ಥಳೀಯರ ಆಕ್ರೋಶ:
ಈ ಬಡಾವಣೆಯ ನಿವಾಸಿಗಳು ಈ ಹಿಂದೆ ಅನೇಕ ಬಾರಿ ಸೆಸ್ಕ್ ಗೆ ಮನವಿ ಸಲ್ಲಿಸಿದ್ದರೂ, ಸ್ಪಂದನೆ ಸಿಗದೆ ಇರುವುದರಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “25 ಕೆವಿ ಟ್ರಾನ್ಸ್‌ಫಾರ್ಮರ್ ನಮ್ಮ ಗೃಹೋಪಯೋಗಕ್ಕೆ ಸಾಲುತ್ತಿಲ್ಲ, ಅದನ್ನು 65 ಕೆವಿಗೆ ಪರಿಷ್ಕರಣೆ ಮಾಡಬೇಕು” ಎಂದು ಆಗಾಗ್ಗೆ ಮನವಿ ಮಾಡಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯವೇ ಇಂದಿನ ಘಟನೆಯ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.