ಮನಸು ಮುರಿದವಳ ಮದುವೆ ಮುರಿದ ಪ್ರೇಮಿ; ಕಲ್ಯಾಣ ಮಂಟಪಕ್ಕೆ ನುಗ್ಗಿ ತಾಳಿ ಕಸಿದ ಯುವಕ!

ಹಾಸನ: ಭಗ್ನ ಪ್ರೇಮಿಯೊಬ್ಬ ಸಿನಿಮೀಯ ರೀತಿಯಲ್ಲಿ ಕಲ್ಯಾಣ ಮಂಟಪಕ್ಕೆ ನುಗ್ಗಿ ತನ್ನ ಪ್ರೇಯಸಿಯ ಕೊರಳಿಗೆ ವರ ಕಟ್ಟುತ್ತಿದ್ದ ತಾಳಿಯನ್ನು ಕಿತ್ತುಕೊಂಡು ಮದುವೆ ಮುರಿದ ಘಟನೆ ಬೇಲೂರಿನಲ್ಲಿ ಗುರುವಾರ ನಡೆದಿದೆ.

ಬೇಲೂರಿನ ತೇಜಸ್ವಿನಿ ಹಾಗ ಶಿವಮೊಗ್ಗ ಮೂಲದ ಪ್ರಮೋದ್‌ಕುಮಾರ್ ಮದುವೆ ಬೇಲೂರಿನ‌ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ನಿಗದಿಯಾಗಿತ್ತು. ವಧು-ವರರ ಕಡೆಯ ಬಂಧುಗಳು, ಆಪ್ತೇಷ್ಟರು ಸಂಭ್ರಮದಲ್ಲಿದ್ದರು.

ಮಾಂಗಲ್ಯಧಾರಣೆ ಸಮಯದಲ್ಲಿ ವರ ತಾಳಿ ಕಟ್ಟಲು ಹೊರಟಾಗ ಪ್ರತ್ಯಕ್ಷನಾದ ಹಾಸನದ ಗವೇನಹಳ್ಳಿಯ ಯುವಕ ನವೀನ್ ತಾಳಿ ಕಿತ್ತಿಟ್ಟುಕೊಂಡು ಎಲ್ಲರನ್ನೂ ಆಘಾತಕ್ಕೊಳಗಾಗಿಸಿದ.

ತಾನು ಹಾಗೂ ವಧು ತೇಜಸ್ವಿನಿ ಪರಸ್ಪರ ಪ್ರೀತಿಸುತ್ತಿದ್ದು, ತನಗೇ ಮದುವೆ ಮಾಡಿಕೊಡಬೇಕು ಎಂದು ಪಟ್ಟು ಹಿಡಿದು ವಾಗ್ವಾದಕ್ಕಿಳಿದ.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಬೇಲೂರು ಪೊಲೀಸರು ನವೀನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು. ಅತ್ತ ತಾನು ವಿವಾಹವಾಗಬೇಕಿದ್ದ ಯುವತಿಯ ಪ್ರೇಮ ಪ್ರಕರಣ ಬಯಲಾದ್ದರಿಂದ ವರ ಪ್ರಮೋದ್, ತೇಜಸ್ವಿನಿ ಕೈ ಹಿಡಿಯಲು ನಿರಾಕರಿಸಿದ. ಇದರಿಂದ ವರನ ಕಡೆಯವರು ಕಲ್ಯಾಣ ಮಂಟಪ ಬಿಟ್ಟು ತೆರಳಿದರು.

ಪೊಲೀಸರು ನವೀನ್ ಹಾಗೂ ಯುವತಿಯ ಕುಟುಂಬದವರಿಂದ ಹೇಳಿಕೆ ಪಡೆಯುತ್ತಿದ್ದಾರೆ.