ಹಾಸನ: ಬೈಕ್ ಗೆ ಗುದ್ದಿದ ಲಾರಿ: ಪೊಲೀಸ್ ಕಾನ್ ಸ್ಟೇಬಲ್ ಸ್ಥಳದಲ್ಲೇ ಸಾವು

ಹಾಸನ, ಮೇ 04: ಹಾಸನ ಹೊರವಲಯದ ಕೆಂಚಟಹಳ್ಳಿ ಬಳಿ ಚಲಿಸುತ್ತಿದ್ದ ಬೈಕ್‌ಗೆ ಲಾರಿ ಡಿಕ್ಕಿಯಾಗಿ ಪೊಲೀಸ್ ಕಾನ್ಸ್‌ಟೇಬಲ್ ಪ್ರಕಾಶ್ (38) ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಶನಿವಾರ ನಡೆದಿದೆ.

ಹನ್ನೊಂದನೇ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಕಾನ್ಸ್‌ಟೇಬಲ್ ಆಗಿದ್ದ ಪ್ರಕಾಶ್, ಹಾಸನ ನಗರದಿಂದ ಸರ್ಕಾರಿ ದ್ವಿಚಕ್ರ ವಾಹನದಲ್ಲಿ ಗಾಡೇನಹಳ್ಳಿಗೆ ಕರ್ತವ್ಯಕ್ಕಾಗಿ ತೆರಳುತ್ತಿದ್ದರು.

ಈ ವೇಳೆ ವೇಗವಾಗಿ ಬಂದ ಲಾರಿಯೊಂದು ಅವರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಪ್ರಕಾಶ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಘಟನೆಯ ಕುರಿತು ಮಾಹಿತಿ ಪಡೆದ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.