ಚನ್ನರಾಯಪಟ್ಟಣ; ತೋಟದ ಮನೆ ಬಾಗಿಲಿಗೇ ಬಂದ ಚಿರತೆ!

ಚನ್ನರಾಯಪಟ್ಟಣ:ತಾಲೂಕಿನ ಹಿರೀಸಾವೆ ಹೋಬಳಿ ಹೊನ್ನಶೆಟ್ಟಿಹಳ್ಳಿ ಗ್ರಾಮದ ಹೊರವಲಯದ ತೋಟದ ಮನೆಯೊಂದರ ಬಾಗಿಲಿಗೇ ಭಾನುವಾರ ಸಂಜೆ  ಚಿರತೆ ಬಂದಿದ್ದು, ಆತಂಕ ಮೂಡಿಸಿದೆ.

ಗ್ರಾಮದ ಬಾಳಗಂಚಿ ರಸ್ತೆಯಲ್ಲಿರುವ ಯಶಸ್ವಿನಿ ಎಂಬುವವರ ತೋಟದ ಮನೆಯ ಬಳಿಗೆ ಸಂಜೆ 7 ಗಂಟೆ ಸುಮಾರಿನಲ್ಲಿ ಬಂದ ಚಿರತೆ ನಂತರ ಬಾಗಿಲ ಹತ್ತಿರ ಹೋಗಿದೆ.

ಈ ಸಮಯದಲ್ಲಿ ಚಿರತೆ ಕಂಡ ಕೋಳಿಗಳು ಊ ಕುರಿಗಳು ಚಿರಾಡಿವೆ. ತಕ್ಷಣ ಮನೆಯಲ್ಲಿದ್ದವರು ಬಾಗಿಲು ತೆಗೆದ ಶಬ್ಧಕ್ಕೆ ಚಿರತೆ ಅಲ್ಲಿಂದ ಓಡಿ ಹೋಗಿರುವ ದೃಶ್ಯ ಮನೆಗೆ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಹೊನ್ನಶೆಟ್ಟಿಹಳ್ಳಿ, ಮುದಿಬೆಟ್ಟ ಕಾವಲು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಚಿರತೆ ಆಗಾಗ ನಾಯಿ ಸೇರಿದಂತೆ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದರು.

ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಚಿರತೆ ಸೆರೆಗೆ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಮನವಿಯಾಗಿದೆ.

ಚಿರತೆ ಪ್ರತ್ಯಕ್ಷವಾಗಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಬಂದಿದ್ದು, ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ವಲಯ ಸಂರಕ್ಷಣಾ ಅಧಿಕಾರಿ ಖಲಂದರ್ ತಿಳಿಸಿದರು.