ಹಾಸನ: ಅಡುಗೆ ಮಾಡಲಿಲ್ಲ ಎನ್ನುವ ಕಾರಣಕ್ಕೆ ಕಬ್ಬಿಣದ ಪೈಪಿನಿಂದ ಪತ್ನಿಯನ್ನು ಹೊಡೆದು ಕೊಲೆ ಮಾಡಿದ್ದ ಪತಿಗೆ ಆಜೀವ ಕಾರಾಗೃಹವಾಸ ಶಿಕ್ಷೆ ಮತ್ತು ರೂ. 10,000 ದಂಡ ವಿಧಿಸಿ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ.
ಅರಕಲಗೂಡು ತಾಲೂಕಿನ ದೊಡ್ಡಬೆಮ್ಮತ್ತಿ ಗ್ರಾಮದ
ಡಿ.ಜೆ.ಕುಮಾರ ಶಿಕ್ಷೆಗೆ ಒಳಗಾದ ಅಪರಾಧಿ.
ಈತ 2022ರ ಮಧ್ಯಾಹ್ನ 1 ಗಂಟೆ ಸುಮಾರಿನಲ್ಲಿ ಅಡುತೆ ಮಾಡಲಿಲ್ಲ ಎಂಬ ನೆಪದಲ್ಲಿ ಹೆಂಡತಿ ಗುಲಾಬಿಯೊಂದಿಗೆ ಜಗಳ ತೆಗೆದು, ಗಲಾಟೆ ಮಾಡಿ ತನ್ನ ಹೆಂಡತಿ ಮೇಲೆ ಕಬ್ಬಿಣದ ಪೈಪ್ ನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದನು.
ಈ ಸಂಬಂಧ ತನಿಖೆ ನಡೆಸಿದ ಅರಕಲಗೂಡು ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಎ. ಹಿದಾಯತ್ ಉಲ್ಲಾ ಷರೀಫ್ ಆರೋಪ ಸಾಬೀತಾದ್ದರಿಂದ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದರು. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಎಸ್.ನಾಗೇಂದ್ರ ವಾದ ಮಂಡಿಸಿದ್ದರು.