ಹಾಸನ, ಫೆಬ್ರವರಿ 9: ಬೇಲೂರು ತಾಲ್ಲೂಕಿನ ಕೊನೆರ್ಲು ಗಡಿಭಾಗದಲ್ಲಿ ಕಳೆದ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬೈಕ್ ಹಾಗೂ ಸಾರಿಗೆ ಬಸ್ ನಡುವಿನ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತಪಟ್ಟ ವ್ಯಕ್ತಿ 31 ವರ್ಷದ ಅಂಗಡಿ ಗ್ರಾಮದ ಮಂಜುನಾಥ್ ಎಂದು ಗುರುತಿಸಲಾಗಿದೆ.
ಮಂಜುನಾಥ್ KA-46 K-8538 ನಂಬರ್‌ನ ಬೈಕ್‌ನಲ್ಲಿ ತಮ್ಮ ಗ್ರಾಮವಾದ ಅಂಗಡಿಗೆ ತೆರಳುತ್ತಿದ್ದ ಸಂದರ್ಭದಲ್ಲಿ, ಎದುರಿನಿಂದ ಬಂದ ಸಾರಿಗೆ ಬಸ್ ಅವರ ಬೈಕ್‌ಗೆ ರಭಸವಾಗಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಮಂಜುನಾಥ್ ಅವರ ಹೆಲ್ಮೆಟ್ ದೂರ ಹಾರಿ ಹೋಗಿದ್ದು, ತಲೆಗೆ ತೀವ್ರ ಪೆಟ್ಟಾಗಿದೆ. ಪರಿಣಾಮ ಅವರು ಸ್ಥಳದಲ್ಲೇ ಪ್ರಾಣಬಿಟ್ಟರು.
ಸ್ಥಳಕ್ಕೆ ಬೇಲೂರು ಗ್ರಾಮಾಂತರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.