ಹಾಸನ: ಮಗನಿಂದಲೇ ತಂದೆ ಕೊಲೆಯಾದ ದಾರುಣ ಘಟನೆ ಬೇಲೂರು ತಾಲೂಕು ಅರೇಹಳ್ಳಿ ಹೋಬಳಿ, ಲಿಂಗಾಪುರ ಗ್ರಾಮದಲ್ಲಿ ನಡೆದಿದೆ.
ಶಶಿಧರ್ (58) ಎಂಬವರು ತಮ್ಮ ಪುತ್ರ ದಿನೇಶ್ (34)ನಿಂದಲೇ ಕೊಲೆಯಾಗಿದ್ದಾರೆ.
ಘಟನೆ ವಿವರ:
ದಿನೇಶ್ ಕಂಠಪೂರ್ತಿ ಮದ್ಯಪಾನ ಮಾಡಿ ಮನೆಗೆ ಬಂದು ತಂದೆ ಶಶಿಧರ್ ಜೊತೆ ಜಗಳವಾಡಿದ್ದು, ಜಗಳವಾಡುವ ಸಂದರ್ಭ ಕಾಲಿನಿಂದ ಒದ್ದ ಪರಿಣಾಮ ಶಶಿಧರ್ ಮನೆಯಲ್ಲಿಯೇ ಕುಸಿದು ಬಿದ್ದಿದ್ದಾರೆ. ಗಾಬರಿಗೊಂಡ ದಿನೇಶ್ ತಾಯಿ ತನ್ನ ಸಹೋದರನ ಮನೆಗೆ ಓಡಿದ್ದು, ಬಳಿಕ ದಿನೇಶ್ ತಂದೆಗೆ ಹೃದಯಾಘಾತವಾಗಿದೆ ಎಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ.
ಆದರೆ, ವೈದ್ಯರು ಶಶಿಧರ್ ಅವರ ಮೃತದೇಹವನ್ನು ಪರಿಶೀಲಿಸಿ ಸಾವನ್ನು ದೃಢಪಡಿಸಿದರು. ತಕ್ಷಣವೇ ದಿನೇಶ್ ಶವವನ್ನು ಅಂತ್ಯ ಸಂಸ್ಕಾರಕ್ಕೆ ತಂದಿದ್ದಾಗ ಗ್ರಾಮಸ್ಥರು ಶಶಿಧರ್ ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.
ಗ್ರಾಮಸ್ಥರ ಆರೋಪ:
ಗ್ರಾಮಸ್ಥರು ಪ್ರತಿನಿತ್ಯ ದಿನೇಶ್ ಕುಡಿದು ಬಂದು ಮನೆಯವರೊಂದಿಗೆ ಜಗಳವಾಡುತ್ತಿದ್ದನು ಎಂದು ಆರೋಪ ಮಾಡಿದ್ದು, ತಂದೆ-ಮಗನ ಜಗಳವನ್ನು ಗ್ರಾಮಸ್ಥರು ನೋಡಿದ್ದಾಗಿ ಹೇಳಿಕೆ ನೀಡಿದರು.
ಪೊಲೀಸ್ ಕ್ರಮ:
ಶಶಿಧರ್ ಅವರ ಪತ್ನಿ, ತನ್ನ ಮಗನ ವಿರುದ್ಧ ಅರೇಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ದಿನೇಶ್‌ನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.