ಅರೆಮಲೆನಾಡಿಗೂ ಕಾಲಿಟ್ಟ ಕಾಡಾನೆ ಹಿಂಡು: ರಾತ್ರೋರಾತ್ರಿ ಜೋಳ‌ದ ಫಸಲು ಖಾಲಿ!

ಹಾಸನ: ಜಿಲ್ಲೆಯ ಅರೆ ಮಲೆನಾಡು ಭಾಗಕ್ಕೆ ಕಾಲಿಟ್ಟ ಕಾಡಾನೆಗಳ ಗಜಪಡೆ ಅಪಾರ ಪ್ರಮಾಣದ ಬೆಳೆ ನಷ್ಟವನ್ನು ಉಂಟುಮಾಡಿದೆ.

ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ ಹೋಬಳಿಯ ನೆಲಬಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರೈತ ಮೋಹನ್ ತನ್ನ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳವನ್ನು ಕಾಡಾನೆಗಳು ಸಂಪೂರ್ಣವಾಗಿ ನಾಶಪಡಿಸಿವೆ. ಫಸಲಿಗೆ ಬಂದಿದ್ದ ಬೆಳೆ ಕಳೆದುಕೊಂಡ ರೈತ ಕಂಗಾಲಾಗಿದ್ದು, ಸರ್ಕಾರದಿಂದ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.

ಕಳೆದ ಒಂದು ವಾರದ ಹಿಂದೆ ಇದೇ ಪ್ರದೇಶದಲ್ಲಿ ಒಂಟಿಸಲಗವೊಂದು ವಿದ್ಯುತ್ ಶಾಕ್‌ಗೆ ಬಲಿಯಾಗಿ ಸಾವನ್ನಪ್ಪಿತ್ತು. ಆದರೆ ಈಗ ಮತ್ತೆ ಕಾಡಾನೆಗಳ ಗುಂಪು ಗ್ರಾಮದ ಜಮೀನುಗಳಿಗೆ ಲಗ್ಗೆ ಇಟ್ಟಿದ್ದು, ರಾತ್ರಿ ವೇಳೆ ತಮ್ಮ ಜಮೀನಿಗೆ ತೆರಳಲು ರೈತರು ಹಿಂದೇಟು ಹಾಕುತ್ತಿದ್ದಾರೆ.

ಬೆಳೆ ಕಳೆದುಕೊಂಡು ಕಂಗಾಲಾಗಿರುವ ರೈತ ಮೋಹನ್

ಈ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಸ್ಥಳೀಯ ರೈತರು, ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯುವಂತೆ ಒತ್ತಾಯಿಸಿದ್ದಾರೆ.

ರೈತ ಮೋಹನ್ ಮಾತನಾಡಿ, “ನಾನು ಶ್ರಮಪಟ್ಟು ಬೆಳೆದ ಬೆಳೆ ಒಂದೇ ರಾತ್ರಿಯಲ್ಲಿ ನಾಶವಾಯಿತು. ಸರ್ಕಾರ ತಕ್ಷಣ ಪರಿಹಾರ ನೀಡಿ, ಈ ಸಮಸ್ಯೆಗೆ ಕಾಯಂ ಪರಿಹಾರ ಕೊಡಬೇಕು” ಎಂದು ಆಗ್ರಹಿಸಿದ್ದಾರೆ. ಕಾಡಾನೆಗಳ ದಾಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.