ಭತ್ತದ ಕಣಕ್ಕೆ ನುಗ್ಗಿದ 40 ಆನೆಗಳು: ಚೀಲದಲ್ಲಿ ತುಂಬಿಸಿದ್ದ 60 ಕ್ವಿಂಟಾಲ್ ಭತ್ತ ಸ್ವಾಹ!

ಹಾಸನ: ಬೇಲೂರು ತಾಲ್ಲೂಕಿನ ದೇವಲಾಪುರ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಮತ್ತೆ ಕಾಟ ನೀಡಿದ್ದು, ರೈತರ ಪಾಲಿಗೆ ಭಾರಿ ನಷ್ಟ ಉಂಟಾಗಿದೆ. ತಡರಾತ್ರಿ ದಾಳಿ ಮಾಡಿದ ಹನ್ನೆರಡು ಕಾಡಾನೆಗಳ ಗುಂಪು, ಎಂಟು ಮಂದಿ ರೈತರಿಗೆ ಸೇರಿದ ಸುಮಾರು 60 ಕ್ವಿಂಟಾಲ್ ಭತ್ತವನ್ನು ತಿಂದು ಹಾಕಿದ್ದು, ಉಳಿದ ಭತ್ತದ ಚೀಲಗಳನ್ನು ಚೆಲ್ಲಾಪಿಲ್ಲಿ ಮಾಡಿವೆ.

ಗ್ರಾಮದ ಮನು, ಹೂವೇಗೌಡ, ಹಾಲೇಗೌಡ, ಹಿರಿಗೌಡ, ಶರತ್, ಹಾಗೂ ರಮೇಶ್ ಎಂಬ ರೈತರು ತಮ್ಮ ಹೊಲಗಳಲ್ಲಿ ಬೆಳೆದಿದ್ದ ಭತ್ತವನ್ನು ಯಂತ್ರದ ಮೂಲಕ ಬೇರ್ಪಡಿಸಿ ಚೀಲಗಳಲ್ಲಿ ತುಂಬಿಸಿದ್ದರು. ಅವರು ಅದನ್ನು ಟ್ರ್ಯಾಕ್ಟರ್ ಮೂಲಕ ಸಾಗಿಸಲು ಸಿದ್ಧತೆ ನಡೆಸುತ್ತಿದ್ದಾಗ, ಕಾಡಾನೆಗಳು ದಾಳಿ ನಡೆಸಿ ಸುಮಾರು ಮೂರು ಲಕ್ಷ ರೂ. ಬೆಲೆಯ ಭತ್ತವನ್ನು ನಾಶಮಾಡಿವೆ.

ಕಷ್ಟಪಟ್ಟು ಬೆಳೆದಿದ್ದ ತಮ್ಮ ಫಸಲನ್ನು ಕಳೆದುಕೊಂಡ ರೈತರು ಕಂಗಾಲಾಗಿದ್ದಾರೆ. “ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ,” ಎಂದು ಅವರು ತಮ್ಮ ದುಃಖವನ್ನು ವ್ಯಕ್ತಪಡಿಸಿದರು. ಈ ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಮತ್ತು ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಡಾನೆಗಳ ಹಾವಳಿಗೆ ತಕ್ಷಣದ ಪರಿಹಾರ ಒದಗಿಸಲು ಸ್ಥಳೀಯ ಆಡಳಿತ ಕ್ರಮ ಕೈಗೊಳ್ಳಬೇಕೆಂದು ರೈತರು ಆಗ್ರಹಿಸಿದ್ದಾರೆ.