ದೊಡ್ಡತಪ್ಪಲು ಬಳಿ ರೈಲು ಹಳಿ ಮೇಲೂ ಕುಸಿದ ಗುಡ್ಡದ ಮಣ್ಣು; ಯಡಕುಮರಿ ಮಾರ್ಗ ದುರಸ್ತಿ ಕಾಮಗಾರಿ ಗೂಡ್ಸ್ ರೈಲು ಸಂಚಾರಕ್ಕೆ ಅಡ್ಡಿ

ಕಾರ್ಮಿಕರಿಗೆ ಆಹಾರ ಸಾಮಾಗ್ರಿ ರವಾನೆಯೂ ಸವಾಲು

ಹಾಸನ: ಸಕಲೇಶಪುರ ತಾಲ್ಲೂಕಿನ ದೊಡ್ಡತಪ್ಪಲು ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಕುಸಿದ ಭಾರೀ ಪ್ರಮಾಣದ ಮಣ್ಣು ಸುಮಾರು 200 ಅಡಿ ಆಳದಲ್ಲಿ ಹಾದು ಹೋಗಿರುವ ಸಕಲೇಶಪುರ-ಮಂಗಳೂರು ರೈಲು ಮಾರ್ಗದ ಮೇಲೆ ಬಿದ್ದಿದ್ದು, ಶಿರಾಡಿ ಬಳಿ ರೈಲು ಹಳಿ ದುರಸ್ತಿ ಕಾಮಗಾರಿ ಸ್ಥಳಕ್ಕೆ ಸಾಮಾಗ್ರಿ ಸಾಗಣೆಗೆ ಅಡ್ಡಿಯುಂಟಾಗಿದೆ.

ಈಗಾಗಲೇ ಯಡಕುಮರಿ-ಕಡಗರವಳ್ಳಿ ರೈಲು ನಿಲ್ದಾಣಗಳ ನಡುವೆ ಶನಿವಾರ ಗುಡ್ಡ ಕುಸಿತದಿಂದ ಈಗಾಗಲೇ ಸಕಲೇಶಪುರ-ಮಂಗಳೂರು ರೈಲ್ವೆ ಮಾರ್ಗ ಬಂದ್ ಆಗಿದೆ. ತ್ವರಿತಗತಿಯಲ್ಲಿ ದುರಸ್ತಿ ಕಾಮಗಾರಿ ನಡೆದಿದ್ದು, ಪ್ರತಿನಿತ್ಯ ಕಾರ್ಮಿಕರು ಹಾಗೂ ತಿಂಡಿ, ಊಟ ಹಾಗೂ ಸಾಮಾಗ್ರಿಗಳನ್ನು ಗೂಡ್ಸ್ ರೈಲುಗಳಲ್ಲಿ ಸಾಗಿಸಲಾಗುತ್ತಿತ್ತು.

ಈಗ ದೊಡ್ಡತಪ್ಪಲು ಬಳಿಯೇ ರೈಲು ಮಾರ್ಗದ ಮೇಲೆ ಗುಡ್ಡ ಕುಸಿದಿರುವುದರಿಂದ ಗೂಡ್ಸ್ ರೈಲು ಸಂಚಾರಕ್ಕೂ ಅಡ್ಡಿಯಾಗಿದೆ.