ಚನ್ನರಾಯಪಟ್ಟಣ: ವೈವಾಹಿಕ ಜೀವನದ ವೈಫಲ್ಯದಿಂದ ಮಾನಸಿಕ ಖಿನ್ನತೆಗೆ ಜಾರಿದ್ದ ತಾಯಿಯೊಬ್ಬಳು ತನ್ನ ಆರು ವರ್ಷದ ಮಗಳನ್ನು ತೊರೆ ನೀರಿನಲ್ಲಿ ಮುಳುಗಿಸಿಕೊಂದಿರುವ ಹೃದಯ ವಿದ್ರಾವಕ ಘಟನೆ ತಾಲ್ಲೂಕಿನ ಜಿನ್ನೇನಹಳ್ಳಿ ಕೊಪ್ಪಲು ಗ್ರಾಮದಲ್ಲಿ ಭಾನುವಾರ ನಡೆದಿದೆ.
ಶಿವಮೊಗ್ಗದ ರಘು ಹಾಗು ಶ್ವೇತಾ ಎಂಬವರ ಪುತ್ರಿ ಸಾನ್ವಿ (6) ಮೃತ ದುರ್ದೈವಿ.ಮಗಳನ್ನು ಕೊಂದ ನಂತರ ತಾನೂ ಸಾಯುವುದಾಗಿ ಕಿರುಚಾಡುತ್ತಿದ್ದ ಆಕೆಯನ್ನು ರಕ್ಷಿಸರುವ ಸ್ಥಳೀಯರು ಪೊಲೀಸರ ವಶಕ್ಕೆ ನೀಡಿದ್ದಾರೆ.
ಮಾನಸಿಕ ಅಸ್ವಸ್ಥ ತಾಯಿ: ಶ್ವೇತಾ ಅವರ ತಂದೆ-ತಾಯಿ ಇಬ್ಬರೂ ನಿಧನರಾಗಿದ್ದು ಈಕೆಗೆ ಏಳು ಸಹೋದರಿಯರು. ಎಲ್ಲರೂ ಮದುವೆಯಾಗಿದ್ದಾರೆ. ಆಗಾಗ ತವರು ಮನೆಗೆ ಬಂದು ಇರುವ ಅಲ್ಪ ಜಮೀನನ್ನು ಅನುಭವಿಸುತ್ತಿದ್ದಾರೆ. ಹಬ್ಬ ಹರಿದಿನಗಳಲ್ಲಿ ಅಕ್ಕತಂಗಿಯರು ಬಂದು ಹೋಗುತ್ತಿದ್ದರು.
ತಂದೆ-ತಾಯಿ ನಿಧನ, ಗಂಡನ ಮನೆಯಲ್ಲಿ ಮನಸ್ತಾಪ ಹೀಗೆ ನಾನಾ ಕಾರಣಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಆಕೆ ಗಂಡನಿಂದ ದೂರವಾಗಿ ಕಳೆದ ಐದು ವರ್ಷಗಳಿಂದ ಶಿವಮೊಗ್ಗ ಬಿಟ್ಟು ತವರು ಮನೆಯಲ್ಲೇ ಇದ್ದಳು. ಗಂಡ ರಘುನಿಂದ ವಿಚ್ಛೇದನ ಪಡೆಯಲು ಮುಂದಾಗಿದ್ದಳು.
ಕಳೆದ ನಾಲ್ಕು ತಿಂಗಳ ಹಿಂದೆ ಗ್ರಾಮದ ಹಿರಿಯರು ಸೇರಿ ರಾಜಿ ಸಂಧಾನದ ಮೂಲಕ ಆಕೆಯನ್ನು ಗಂಡನ ಮನೆಗೆ ಕಳುಹಿಸಿಕೊಟ್ಟಿದ್ದರು. ಆದರೆ ಶಿವಮೊಗ್ಗದಲ್ಲಿ ಇರಲು ಸಾಧ್ಯವಾಗದೆ ಶನಿವಾರ ಮಗುವಿನೊಂದಿಗೆ ತವರಿಗೆ ಬಂದಿದ್ದಳು ಎನ್ನಲಾಗಿದೆ.
ಮಗುವನ್ನು ಆಕೆ ನೀರಿನಲ್ಲಿ ಮುಳುಗಿಸುತ್ತಿರುವುದನ್ನು ಕಂಡ ಸ್ಥಳಿಯರು ನೀರಿಗಿಳಿದು ಮಗುವನ್ನು ಆಚೆಗೆ ಎಳೆದು ತಂದು ಪ್ರಥಮ ಚಿಕಿತ್ಸೆ ನೀಡಿ ಮಗುವನ್ನು ಬದುಕಿಸಲು ಯತ್ನಿಸಿದರೂ ಫಲ ದೊರಕಿಲ್ಲ.
ಶ್ವೇತಾ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.