ರಸ್ತೆ ಮೇಲೆ ಬಿದ್ದ ಬೈಕ್ ಸವಾರನ ಮೇಲೆ ಹರಿದ ವಾಹನಗಳು; ಚನ್ನರಾಯಪಟ್ಟಣ ಬೈಪಾಸ್ ನಲ್ಲಿ ಹೃದಯ ವಿದ್ರಾವಕ ಅಪಘಾತ

ಹಾಸನ: ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಬೈಕ್ ಸವಾರನ ಮೇಲೆ ಹಿಂದಿನಿಂದ ಬಂದ ವಾಹನಗಳು ಹರಿದು ಯುವಕನ ದೇಹ ಛಿದ್ರವಾದ ಹೃದಯ ವಿದ್ರಾವಕ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಚನ್ನರಾಯಪಟ್ಟಣ ಬೈಪಾಸ್ ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದ, ನಗರದ ಗೌರಿ ಕೊಪ್ಪಲಿನ ರಾಕೇಶ್ (27) ಮೃತ ಬೈಕ್ ಸವಾರ

ಬೆಂಗಳೂರಿನಿಂದ ತನ್ನ ಕೆಟಿಎಂ ಬೈಕ್ ನಲ್ಲಿ ನಗರಕ್ಕೆ ಬರುತ್ತಿದ್ದ ಆತ ವೇಗವಾಗಿ ಬೈಕ್ ಚಲಾಯಿಸುತ್ತಿದ್ದ. ಬೈಪಾಸ್ ನಲ್ಲಿ ನಿಯಂತ್ರಣ ತಪ್ಪಿದ ಬೈಕ್ ರಸ್ತೆ ಮೇಲೆ ಬಿದ್ದಿದೆ.

ಹಿಂದಿನಿಂದ ವೇಗವಾಗಿ ಬರುತ್ತಿದ್ದ ಮೂರ್ನಾಲ್ಕು ವಾಹನಗಳು ನಿಯಂತ್ರಣ ಸಾಧ್ಯವಾಗದೆ ಆತನ ಮೇಲೆ ಹರಿದಿವೆ. ಇದರಿಂದ ಸ್ಥಳದಲ್ಲೇ ಆತ ಪ್ರಾಣ ಕಳೆದುಕೊಂಡಿದ್ದಲ್ಲದೇ ದೇಹವೂ ಛಿದ್ರಗೊಂಡಿತು.

ರಾಕೇಶ್ ಮೇಲೆ ಹರಿದ ವಾಹನಗಳೆಲ್ಲವೂ ನಿಲ್ಲಿಸದೆ ಪರಿಯಾಗಿವೆ. ಆದರೆ ಹಿಂದಿನಿಂದ ಬಂದ ಕಾರೊಂದು ದೇಹದ ಮೇಲೆ ಹತ್ತುವುದನ್ನು ತಪ್ಪಿಸಲು ಯತ್ನಿಸಿ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಕಾರಿನ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಚನ್ನರಾಯಪಟ್ಟಣ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.