ಹಾಸನ: ಐಶರ್ ಕ್ಯಾಂಟರ್ ಹಾಗೂ ಡೀಸೆಲ್ ಟ್ಯಾಂಕರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ಸ್ಥಳದಲ್ಲೇ ಮೃತಪಟ್ಟು, ಚಾಲಕ ಸೇರಿ ಐವರಿಗೆ ಗಂಭೀರ ಗಾಯಗಳಾದ ಘಟನೆ ಅರಸೀಕೆರೆ ತಾಲ್ಲೂಕಿನ, ನಾಗರಹಳ್ಳಿ ಕಟ್ಟೆ ಬಳಿ ನಡೆದಿದೆ.
ಬಿಹಾರ ಮೂಲದ ಶಹಬಾಜ್ (25) ಮೃತ ಯುವಕ. ಐಶ್ವರ್ನ ಚಾಲಕ ಸೇರಿ ಐವರು ಗಂಭೀರವಾಗಿ ಗಾಯಗೊಂಡಿದ್ದು ಎಲ್ಲರನ್ನೂ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಿಪಟೂರು ಕಡೆಯಿಂದ ಬರುತ್ತಿದ್ದ KA-13 Q-1344 ನಂಬರ್‌ನ ಡೀಸೆಲ್ ಟ್ಯಾಂಕರ್, ಮೆಕ್ಕೆಜೋಳ ತುಂಬಿಕೊಂಡು ಅರಸೀಕೆರೆ ಕಡೆಗೆ ತೆರಳುತ್ತಿದ್ದ ಐಶರ್ ಕ್ಯಾಂಟರ್ ಗೆ ಡಿಕ್ಕಿಯಾಗಿದೆ.
ಕ್ಯಾಂಟರ್‌ನಲ್ಲಿ ಬಿಹಾರ ಮೂಲದ ನಾಲ್ವರು ಕಾರ್ಮಿಕರಿದ್ದು ಡಿಕ್ಕಿ ರಭಸಕ್ಕೆ ಅವರಲ್ಲಿ ಶಹಬಾಜ್ ಎಂಬಾತನ ರುಂಡ-ಮುಂಡ ಬೇರ್ಪಟ್ಟವು.
ತಲೆ ಕ್ಯಾಂಟರ್‌ನಲ್ಲಿದ್ದ ಮೆಕ್ಕೆಜೋಳದ ಕೆಳಗೆ ಬಿದ್ದಿದ್ದರೆ, ಮುಂಡ ಕ್ಯಾಂಟರ್‌ನಿಂದ ಹಾರಿ ರಸ್ತೆ ಬದಿಗೆ ಬಿದ್ದಿದ್ದು ಭೀಕರ ದೃಶ್ಯ ನಿರ್ಮಾಣವಾಗಿತ್ತು.
ಚಾಲಕ ಸೇರಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಟ್ಯಾಂಕರ್ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅಪಘಾತದ ನಂತರ ಡಿಸೇಲ್ ಟ್ಯಾಂಕರ್ ಚಾಲಕ ಪರಾರಿಯಾಗಿದ್ದು, ಮೆಕ್ಕೆಜೋಳ ರಸ್ತೆಯಲ್ಲೆಲ್ಲ ಚೆಲ್ಲಾಡಿದೆ.
ಗಂಡಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಾಹನಗಳನ್ನು ವಶಕ್ಕೆ ಪಡೆದು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.