ಹಾಸನ: ಕೆಎಸ್‌ಆರ್‌ಟಿಸಿ ಬಸ್ ಹಾಗೂ ಆಲ್ಟೋ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ದಾರುಣ ಸಾವಿಗೀಡಾದ ಘಟನೆ ಚನ್ನರಾಯಪಟ್ಟಣ, ತಾಲ್ಲೂಕಿನ, ಊಪಿನಹಳ್ಳಿ ಗೇಟ್ ಬಳಿ ನಡೆದಿದೆ.
ಮಡಬ ಗ್ರಾಮದ ಮಂಜುನಾಥ್ (26) ಮೃತ ದುರ್ದೈವಿ. ಮತ್ತೋರ್ವನ ಗುರುತು ಪತ್ತೆಯಾಗಿಲ್ಲ.
ಚನ್ನರಾಯಪಟ್ಟಣದ ಕಡೆಗೆ ಬರುತ್ತಿದ್ದ ಕಾರು, ಶಿವಮೊಗ್ಗದ ಕಡೆಗೆ ತೆರಳುತ್ತಿದ್ದ KA-11-F-0511 ನಂಬರ್‌ನ ಸಾರಿಗೆ ಬಸ್ ಗೆ ಮುಖಾಮುಖಿ ಡಿಕ್ಕಿಯಾದ ರಭಸಕ್ಕೆ ಬಸ್ಸಿನ ಮುಂಭಾಗ ಮುರಿದುಕೊಂಡು ಕಾರು ಕ್ಯಾಬಿನ್ ಕೆಳ ಭಾಗಕ್ಕೆ ನುಗ್ಗಿದೆ. ಕಾರು ಅಪ್ಪಚ್ಚಿಯಾಗಿದ್ದು ಒಳಗಿದ್ದವರ ದೇಹಗಳು ನುಜ್ಜುಗುಜ್ಜಾಗಿವೆ.
ಕಾರನ್ನು ಹೊರಗೆಳೆದು ಮೃತದೇಹ ಹೊರ ತೆಗೆಯಲು ಪೊಲೀಸರು ಹರಸಾಹಸಪಟ್ಟರು. ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.