ಹಾಸನ: ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಹಿಂದಕ್ಕೆ ಎಳೆಯುತ್ತಿದ್ದಾಗ ವೇಗವಾಗಿ ಬಂದ ಬಸ್ ಡಿಕ್ಕಿಯಾಗಿ ಸರ್ಕಾರಿ ಶಾಲೆ ಶಿಕ್ಷಕರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಹೊಳೆನರಸೀಪುರ ಪಟ್ಟಣದಲ್ಲಿ ನಡೆದಿದೆ.
ಹೊಳೆನರಸೀಪುರ ತಾಲ್ಲೂಕಿನ ಬೈಚನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ, ಅರಕಲಗೂಡು ತಾಲ್ಲೂಕಿನ ಬೆಳವಾಡಿ ಮೂಲದ ಜಗದೀಶ್ (53) ಮೃತಪಟ್ಟ ಶಿಕ್ಷಕ.
ಶಾಲೆಯಿಂದ ಬಂದ ನಂತರ ಹಾಸನ-ಮೈಸೂರು ರಸ್ತೆಯಲ್ಲಿನ ಬ್ಯಾಂಕ್‌ಗೆ ಹೋಗಿದ್ದ ಅವರು ಹೊರ ಬಂದು ರಸ್ತೆ ಪಕ್ಕ ನಿಲ್ಲಿಸಿ ಹೋಗಿದ್ದ ಬೈಕನ್ನು ರಸ್ತೆ ಕಡೆಗೆ ಎಳೆಯುತ್ತಿದ್ದಾಗ ಮೈಸೂರು ಕಡೆಯಿಂದ ಬಂದ ಕೆ.ಎಸ್.ಆರ್.ಟಿ.ಸಿ. ಬಸ್ ಡಿಕ್ಕಿ ಹೊಡೆಯಿತು.
ಇದರಿಂದ ಕೆಳಗೆ ಬಿದ್ದ ಶಿಕ್ಷಕನ ಮೇಲೆ ಸಾರಿಗೆ ಬಸ್‌ನ ಚಕ್ರ ಹರಿದಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟರು.
ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.