ಮಲೆನಾಡಿನ ಜನರ ನಿದ್ದೆಗೆಡಿಸಿದ ಕರಡಿ; ಮನೆ ಬಾಗಿಲಿಗೆ ಬಂದು ನಿಲ್ಲುತ್ತಿದೆ ದೈತ್ಯ ಕಾಡಾನೆ

ಮತ್ತೊಂದು ಅನಾಹುತಕ್ಕೆ ಮುನ್ನ ಆನೆ ಸೆರೆಗೆ ಜನರ ಆಗ್ರಹ

ಹಾಸನ: ಗುಂಪಿನಿಂದ ಬೇರ್ಪಟ್ಟಿರುವ ಆಕ್ರಮಣಕಾರಿ ಪ್ರವೃತ್ತಿಯ ಕರಡಿ ಹೆಸರಿನ ದೈತ್ಯ ನರಹಂತಕ ಕಾಡಾನೆಯೊಂದು ಜಿಲ್ಲೆಯ ಮಲೆನಾಡು ಭಾಗದ ಜನರ ನಿದ್ದೆಗೆಡಿಸಿದೆ.

ಸಕಲೇಶಪುರ ತಾಲ್ಲೂಕಿನ, ಬಾಳ್ಳುಪೇಟೆ, ಕಲ್ಕುಂದ, ಇರುಕುರಹಳ್ಳಿ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಕಾಡಾನೆ, ಮನುಷ್ಯರು ಕಂಡ ತಕ್ಷಣ ಅವರ ಮೇಲೆ ದಾಳಿ ನಡೆಸುತ್ತಿದೆ.

ಭುವನೇಶ್ವರಿ, ಓಲ್ಡ್‌ಬೆಲ್ಟ್ ಹೆಸರಿನ ಕಾಡಾನೆಗಳ ಗುಂಪಿನಲ್ಲೇ ಇರುತ್ತಿದ್ದ ಕರಡಿ ಕೆಲ ದಿನಗಳಿಂದ ಗುಂಪಿನಿಂದ ಬೇರ್ಪಟ್ಟು ಊರೂರು ಸುತ್ತುತ್ತಿದೆ. ಬೆಳ್ಳಬೆಳಗ್ಗೆ ಮನೆ ಬಾಗಿಲಿಗೆ ಬಂದು ನಿಲ್ಲುತ್ತಿದೆ.

ಬೇಲೂರು ತಾಲ್ಲೂಕಿನ ಮತ್ತಾವರ ಗ್ರಾಮದಲ್ಲಿ ವಸಂತ್ ಎಂಬುವವರನ್ನು ಬಲಿ ಪಡೆದಿದ್ದ ಕಾಡಾನೆ ಇದೀಗ ಸಕಲೇಶಪುರ ತಾಲ್ಲೂಕಿನ ಜನನಿಬಿಡ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿದೆ.

ನಿನ್ನೆ ಕಲ್ಕುಂದ ಗ್ರಾಮದಲ್ಲಿ ದಾಳಿ ಮಾಡಿ ಇಬ್ಬರನ್ನು ಗಾಯಗೊಳಿಸಿರುವ ಕರಡಿ, ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸಿದ್ದರಿಂದ ಹಾಗೂ ಸ್ಥಳದಲ್ಲಿದ್ದ ಕಾರ್ಮಿಕರು ಕಿರುಚಿದ್ದರಿಂದ ಅಲ್ಲಿಂದ ಕದಲಿತ್ತು. ಹೀಗಾಗಿ ಎರಡು ಬಡಜೀವಗಳು ಉಳಿದವು.

ಕರಡಿ ಕಾಡಾನೆ ಚಲನವಲನ ಗಮನಿಸುತ್ತಿರುವ ಇಟಿಎಫ್ ಹಾಗೂ ಆರ್‌ಆರ್‌ಟಿ ಸಿಬ್ಬಂದಿಯನ್ನೇ ಅಟ್ಟಾಡಿಸುತ್ತಿರುವ ಕರಡಿ ಅಟ್ಟಾಡಿಸುತ್ತಿದೆ.

ಅನಾಹುತ ಸಂಭವಿಸುವ ಮುನ್ನ ನರಹಂತಕ ಕಾಡಾನೆಯನ್ನು ಸೆರೆ ಹಿಡಿಯುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.