ಹಾಸನ: ಸಾಮಾನ್ಯವಾಗಿ ವಾಹನಗಳ ಮಾಲೀಕರು ಹೆಚ್ಚು ಸಾಮರ್ಥ್ಯದ ವಾಹನಗಳಿಗೆ ಅಪ್ ಗ್ರೇಡ್ ಆಗಲು ಹಳೇ ವಾಹನ ಮಾರಾಟ ಮಾಡುತ್ತಾರೆ. ಆದರೆ ಕಳ್ಳರು ಟಾಟಾ ಏಸ್ ವಾಹನ ಕದ್ದು ಪರಾರಿಯಾಗುವಾಗ ಕಣ್ಣಿಗೆ ಬಿದ್ದ ಹೆಚ್ಚು ಸಾಮರ್ಥ್ಯದ ಲೈಲ್ಯಾಂಡ್ ಮಿನಿ ಟ್ರಕ್ ಕದ್ದು ಟಾಟಾ ಏಸ್ ಅಲ್ಲೇ ಬಿಟ್ಟು ವಾಹನ ಅಪ್ ಗ್ರೇಡ್ ಮಾಡಿಕೊಂಡು ಹೋಗಿರುವ ಘಟನೆ ಚಿಕ್ಕಮಲ್ಲೇನಹಳ್ಳಿಯಲ್ಲಿ ನಡೆದಿದೆ. ಕಳ್ಳರ ಈ ವೆಹಿಕಲ್ ಅಪ್ ಗ್ರೇಡ್ ವಿಧಾನ ಅಚ್ಚರಿ ಮೂಡಿಸಿದ್ದು, ಈ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮೂವರು ಕಳ್ಳರ ತಂಡವು ಮೊದಲು ಹಾಸನ ಹೊರವಲಯದ ಬಿಟ್ಟಗೋಡನಹಳ್ಳಿ ಗ್ರಾಮದಲ್ಲಿ ಟಾಟಾ ಏಸ್ ವಾಹನ ಕದ್ದಿದೆ. ನಂತರ ಅದನ್ನು ಬಿಟ್ಟು ಚಿಕ್ಕಮಲ್ಲೇನಹಳ್ಳಿಯಲ್ಲಿ ಗ್ರಾಮಸ್ಥ ಧನು ಎಂಬವರ ಅಶೋಕ್ ಲೈಲ್ಯಾಂಡ್ ಮಿನಿಟ್ರಕ್ ಕದ್ದೊಯ್ದಿದ್ದಾರೆ.
ಈ ಘಟನೆ ಬೆಳಿಗ್ಗೆ 4:30ರ ಸುಮಾರಿಗೆ ನಡೆದಿದ್ದು, ಕಳ್ಳರು ನಕಲಿ ಕೀಲಿ ಬಳಸಿಕೊಂಡು ವಾಹನದ ಬಾಗಿಲು ತೆರೆದಿದ್ದಾರೆ. ಚಾಲಕನ ಸೀಟ್‌ನಲ್ಲಿ ಒಬ್ಬ ಕುಳಿತು, ಉಳಿದಿಬ್ಬರು ವಾಹನವನ್ನು ತಳ್ಳಿದ್ದಾರೆ. ಬಳಿಕ ವಾಹನವನ್ನು ಜರ್ಕ್ ಸ್ಟಾರ್ಟ್ ಮಾಡಿ ಪರಾರಿಯಾಗಿದ್ದಾರೆ.
ಈ ವಾಹನ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಪ್ರಕರಣವನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಮೂರು ತಿಂಗಳ ಹಿಂದೆ ಇದೇ ವಾಹನದ ಬ್ಯಾಟರಿ ಕಳ್ಳತನವಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಗೊರೂರುಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ.