ಚನ್ನರಾಯಪಟ್ಟಣ: ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಂತದಲ್ಲಿಯೇ ಶಿಕ್ಷಣದ ಜತೆಗೆ ವ್ಯವಹಾರ ಜ್ಞಾನ ಕಲ್ಪಿಸುವುದು ಅಗತ್ಯ ಎಂದು ಜ್ಞಾನಪ್ರಭಾ ಇಂಟರ್‌ನ್ಯಾಷನಲ್ ಸ್ಕೂಲ್‌ನ ಸಂಸ್ಥಾಪಕ ಅಧ್ಯಕ್ಷ ಎ.ಜಿ.ಪ್ರಭಾಕರ್ ಹೇಳಿದರು.
ತಾಲೂಕಿನ ಹಿರೀಸಾವೆಯ ಜ್ಞಾನಪ್ರಭಾ ಇಂಟರ್ ನ್ಯಾಷನಲ್(ಐಸಿಎಸ್‌ಇ ಬೋರ್ಡ್) ಶಾಲೆಯ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಮಕ್ಕಳ ಸಂತೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇದು ಮಕ್ಕಳ ಮುಂದಿನ ಭವಿಷ್ಯದಲ್ಲಿ ಬದುಕಿನ ದಾರಿದೀಪವಾಗಲಿದೆ ಎಂದರು.
ಜಗತ್ತು ಮೊದಲಿನಂತಿಲ್ಲ. ನಾವು ಅಂದುಕೊಂಡಂತೆ ಶಿಕ್ಷಣವನ್ನು ಮಾತ್ರ ಕಲಿತರೆ ಇಲ್ಲಿ ಸುಲಭವಾಗಿ ಬದುಕಲು ಸಾಧ್ಯವಿಲ್ಲ. ಅತಿ ವೇಗದಲ್ಲಿ ಸಾಗುತ್ತಿರುವ ಆಧುನಿಕ ಜಗತ್ತಿನಲ್ಲಿ ಶಿಕ್ಷಣದ ಜತೆಗೆ ವ್ಯವಹಾರ ಹಾಗೂ ಸಾಮಾನ್ಯ ಜ್ಞಾನ ಅತಿಮುಖ್ಯವಾಗಲಿದೆ ಎಂದು ತಿಳಿಸಿದರು.
ಆವರಣದಲ್ಲಿ ವಿದ್ಯಾರ್ಥಿಗಳು ಬಟ್ಟೆ ಹಾಗೂ ಚಪ್ಪಲಿ ವ್ಯಾಪಾರ ಆಕರ್ಷಣೀಯವಾಗಿ ಮಾಡಿದರು. ಅಲ್ಲದೆ ಸೊಪ್ಪು-ತರಕಾರಿ, ಬಾಳೆಹಣ್ಣು, ಕಲ್ಲಂಗಡಿ ಹಾಗೂ ಅವರೆಕಾಯಿ ವ್ಯಾಪಾರ ಜೋರಾಗಿಯೇ ನಡೆಯಿತು. ಜತೆಗೆ ಪಾನೀಪುರಿ, ಚುರುಮುರಿ, ಹೋಳಿಗೆ, ಚಕ್ಕುಳಿ, ನಿಪ್ಪಟ್ಟು, ರವೆ ಉಂಡೆ, ಕೊಬ್ಬರಿ ಮಿಠಾಯಿ ಹಾಗೂ ಫ್ರೂಟ್ ಸಲಾಡ್ ಸೇರಿದಂತೆ ವಿವಿಧ ಖಾದ್ಯಗಳು ಹಾಗೂ ತಂಪು ಪಾನೀಯಗಳು ಗ್ರಾಹಕರ ಬಾಯಲ್ಲಿ ನೀರು ಬರಿಸಿದ್ದು ಖರಿದಿಸಿ ಸವಿದರು.
ಜ್ಞಾನಪ್ರಭಾ ಇಂಟರ್‌ನ್ಯಾಷನಲ್ ಶಾಲೆಯ ಮುಖ್ಯಶಿಕ್ಷಕ ಸಂಜಯ್ ಕ್ರಿಸ್ಟೋಫರ್, ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ಪಾಲಕರು ಇದ್ದರು.