ಹಾಸನ: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಹದಿನಾಲ್ಕು ವರ್ಷದ ವಿಶೇಷ ಚೇತನ ಬಾಲಕನನ್ನು ಹೃದಯ ಶಸ್ತ್ರ ಚಿಕಿತ್ಸೆಗಾಗಿ ನಗರದ ಶ್ರೀ ಚಾಮರಾಜೇಂದ್ರ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಿಂದ ಬೆಂಗಳೂರಿಗೆ ಝೀರೋ ಟ್ರಾಫಿಕ್‌ನಲ್ಲಿ ಅಂಬುಲೆನ್ಸ್ ಮೂಲಕ ರವಾನಿಸಲಾಯಿತು.
ಹಾಸನ ನಗರದ ಎಂಭತ್ತು ಅಡಿ ರಸ್ತೆಯ ನಿವಾಸಿ ಅಮ್ಜದ್ ಪಾಷಾ-ರಜೀಯಾಬೇಗಂ ದಂಪತಿ ಪುತ್ರ ಹದಿನಾಲ್ಕು ವರ್ಷದ ಮಹಮದ್ ಕೈಫ್ ನನ್ನು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ನಾಲ್ಕು ಗಂಟೆಗಳಲ್ಲಿ ತಲುಪಿಸುವ ಜವಾಬ್ದಾರಿಯೊಂದಿಗೆ ಅಂಬುಲೆನ್ಸ್ ಹೊರಟಿತು.
ಕಳೆದ ನಾಲ್ಕು ದಿನಗಳಿಂದ ಹಿಮ್ಸ್‌ನ ಶ್ರೀ ಚಾಮರಾಜೇಂದ್ರ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಮದ್ ಕೈಫ್ ಗೆ ತುರ್ತು ಶಸ್ತ್ರಚಿಕಿತ್ಸೆ ಅಗತ್ಯ ಕಂಡು ಬಂದಿದ್ದರಿಂದ ಜಯದೇವಕ್ಕೆ ರವಾನಿಸಲು ವೈದ್ಯರು ಶಿಫಾರಸು ಮಾಡಿದರು.