ಹಾಸನದ ಮಂಜುನಾಥ ಆಸ್ಪತ್ರೆಯಲ್ಲಿ ಬೆಂಕಿ; ಹೊರಗೋಡಿ ಬಂದು ಜೀವ ಉಳಿಸಿಕೊಂಡ ರೋಗಿಗಳು

ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ; ಕಿಟಕಿ ಗಾಜು ಒಡೆದ ಆಸ್ಪತ್ರೆ ಕೆಲಸಗಾರರು

ಹಾಸನ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಶಂಕರ ಮಠ ರಸ್ತೆಯಲ್ಲಿನ ಮಂಜುನಾಥ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡು ಹಬ್ಬಿದ ದಟ್ಟ ಹೊಗೆಯಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಆಸ್ಪತ್ರೆಯ ಎಕ್ಸ್ ರೇ ಕೊಠಡಿಯಲ್ಲಿ ಹೊತ್ತಿಕೊಂಡ ಬೆಂಕಿಯಿಂದ ಕೆಲ ನಿಮಿಷಗಳಲ್ಲೇ ಇಡೀ ಆಸ್ಪತ್ರೆ ದಟ್ಟ ಹೊಗೆಯಿಂದ ತುಂಬಿ ಹೋಯಿತು.

ಒಳಗಿದ್ದ ರೋಗಿಗಳು ಜೀವ ಉಳಿಸಿಕೊಳ್ಳಲು ಆಸ್ಪತ್ರೆಯಿಂದ ಹೊರಗೆ ಓಡಿ ಬಂದರು. ಆಸ್ಪತ್ರೆ ಸಿಬ್ಬಂದಿ ಕಿಟಕಿ ಗಾಜಿಗಳನ್ನು ಒಡೆದು ಹೊಗೆ ಹೊರ ಹೋಗುವಂತೆ ಮಾಡಿದರು.

ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಅನಾಹುತ ತಪ್ಪಿಸಿದರು. ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಿದೆ.