ಹೊಳೆನರಸೀಪುರ ಕ್ಷೇತ್ರದಲ್ಲಿ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ; ಇಬ್ಬರಿಗೆ ಗಾಯ

ಹಾಸನ: ಹೊಳೆನರಸೀಪುರ ತಾಲ್ಲೂಕಿನ, ಕೆ.ಬಿ‌.ಪಾಳ್ಯದಲ್ಲಿ ಮತದಾನ ಪ್ರಕ್ರಿಯೆ ಮುಗಿಯುವ ವೇಳೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು ಕಾಂಗ್ರೆಸ್‌ನ ಇಬ್ಬರು ಕಾರ್ಯಕರ್ತರು ಗಾಯಗೊಂಡಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ.

ಮೋಹನ್‌ಕುಮಾರ್, ಗಿರೀಶ್ ಮೇಲೆ ಹಲ್ಲೆ ನಡೆಸಲಾಗಿದ್ದು, ಮೋಹನ್ ಸ್ಥಿತಿ ಗಂಭೀರವಾಗಿದೆ. ಇಬ್ಬರನ್ನೂ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೆಡಿಎಸ್‌‌ ಕಾರ್ಯಕರ್ತರಾದ ಸಾಗರ್ ಹಾಗೂ ಪ್ರದೀಪ್ ಹಲ್ಲೆ ಮಾಡಿದ್ದಾಏ ಎಂದು ಆರೋಪಿಸಲಾಗುತ್ತಿದೆ.

ಕೆ.ಬಿ.ಪಾಳ್ಯದ ಮತಗಟ್ಟೆ ಸಂಖ್ಯೆ 249 ಕ್ಕೆ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್‌ಪಟೇಲ್ ತಾಯಿ ಅನುಪಮಾಮಹೇಶ್ ಭೇಟಿ ನೀಡಿದ್ದರು.
ಅಲ್ಲಿದ್ದ ಕೆಲವು ಜೆಡಿಎಸ್‌ ಕಾರ್ಯಕರ್ತರು ಎಚ್.ಡಿ.ರೇವಣ್ಣ ಹಾಗೂ ಜೆಡಿಎಸ್ ಪರ ಜೈಕಾರ ಕೂಗಿದರು.

ಇದರಿಂದ ರೊಚ್ಚಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿ ಪರ ಘೋಷಣೆ ಕೂಗಿದರು. ಇದರಿಂದ ಪರಸ್ಪರ ವಾಗ್ವಾದ ಆರಂಭವಾಯಿತು.

ಇದು ವಿಕೋಪಕ್ಕೆ ತಿರುಗಿ ಎರಡು ಪಕ್ಷದವರ ನಡುವೆ ಮಾರಾಮಾರಿ ಆರಂಭವಾಯಿತು. ಕಬ್ಬಿಣದ ರಾಡ್‌ನಿಂದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಜೆಡಿಎಸ್ ಕಾರ್ಯಕರ್ತರು ಹಲ್ಲೆ ನಡೆಸಿದರು ಎಂದು ಆರೋಪಿಸಿದ್ದಾರೆ.

ಆಸ್ಪತ್ರೆಗೆ ಮೈಸೂರು ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕ ಅಮಿತ್ ಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೇತಾ ಭೇಟಿ ನೀಡಿ ಗಾಯಾಳುಗಳಿಂದ ಮಾಹಿತಿ ಪಡೆದರು.