ಹಾಸನ: ನಗರದ ಹಿಮ್ಸ್ ಆಸ್ಪತ್ರೆ ಆವರಣದಲ್ಲಿ ಖಾಸಗಿ ಆಸ್ಪತ್ರೆಗೆ ರೋಗಿ ಕರೆದೊಯ್ಯುವ ವಿಚಾರಕ್ಕೆ ಅಂಬ್ಯುಲೆನ್ಸ್ ಡ್ರೈವರ್‌ಗಳ ನಡುವೆ ಮಾರಾಮಾರಿ ನಡೆದಿದೆ.
ಹಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯುಬೇಕಿತ್ತು. ಈ ವೇಳೆ ಆಸ್ಪತ್ರೆ ಆವರಣಕ್ಕೆ ಬಂದ ಎರಡು ಅಂಬ್ಯುಲೆನ್ಸ್‌ಗಳ ಚಾಲಕರು ತಾವೇ ರೋಗಿಯನ್ನು ಕರೆದೊಯ್ಯಲು ಪೈಪೋಟಿಗಿಳಿದರು.
ಇದರಿಂದ ಆರಂಭವಾದ ಜಗಳ ಹೊಡೆದಾಟಕ್ಕೆ ದಾರಿ ಮಾಡಿಕೊಟ್ಟಿತು. ಒಬ್ಬ ಚಾಲಕನ ಕಡೆಯ ಗುಂಪು ಮತ್ತೊಬ್ಬ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿತು. ಅದಕ್ಕೆ ಪ್ರತಿಯಾಗಿ ಮತ್ತೊಬ್ಬ ಚಾಲಕ ಕಲ್ಲು, ಸ್ಕ್ರೂಡೈವರ್‌ಗಳಿಂದ ಹಲ್ಲೆ ನಡೆಸಿದ. ಇದರಿಂದ ಒಬ್ಬನ ಮೂಗು, ಬಾಯಿಗಳಿಂದ ರಕ್ತ ಸುರಿಯಿತು.
ಸ್ಥಳದಲ್ಲಿದ್ದ ಆಸ್ಪತ್ರೆ ಭದ್ರತಾ ಸಿಬ್ಬಂದಿ ಹೊಡೆದಾಟ ತಡೆದು ಎಲ್ಲರನ್ನೂ ಅಲ್ಲಿಂದ ಕಳುಹಿಸಿದರು. ಸರ್ಕಾರಿ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳನ್ನು ಸಾಗಿಸಲು ಏರ್ಪಟ್ಟಿರುವ ಪೈಪೋಟಿ ಈ ಹಂತ ತಲುಪಿದ್ದು, ವ್ಯವಸ್ಥೆ ನಿಯಂತ್ರಣಕ್ಕೆ ಹಿಮ್ಸ್ ಕ್ರಮಕೈಗೊಳ್ಳುವ ಅಗತ್ಯವಿದೆ.