ಹಾಸನ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಸ್ಥಳದಲ್ಲೇ ತಂದೆ ಮೃತಪಟ್ಟು, ಮಗಳು ಗಂಭೀರವಾಗಿ ಗಾಯಗೊಂಡ ಘಟನೆ ಬೇಲೂರು ತಾಲ್ಲೂಕಿನ, ಕೊರಟಿಗೆರೆ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ.
ಚಿಕ್ಕಮಗಳೂರು ಮೂಲದ, ಬೇಲೂರಿನ ದುರ್ಗಾಫ್ಯಾಷನ್ಸ್ ಬಟ್ಟೆ ಅಂಗಡಿ ಮಾಲೀಕ, ಮಾನವ ಹಕ್ಕು ಕಾರ್ಯಕರ್ತ ದಯಾನಂದ (46) ಮೃತ ವ್ಯಕ್ತಿ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ, ಮಗಳು ನಿಶ್ಮಿತಾ (16) ಗಂಭೀರವಾಗಿ ಗಾಯಗೊಂಡಿದ್ದು ಬೇಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಾನುವಾರ ಚಿಕ್ಕಮಗಳೂರಿಗೆ ತೆರಳಿದ್ದ ದಯಾನಂದ ಅವರು ಇಂದು ಬೆಳಗ್ಗೆ ಮಗಳನ್ನು ಶಾಲೆಗೆ ಬಿಡಲೆಂದು ಚಿಕ್ಕಮಗಳೂರಿನಿಂದ ಬೇಲೂರಿಗೆ KA-46-M-6430 ನಂಬರ್‌ನ ಕಾರಿನಲ್ಲಿ ಬರುತ್ತಿದ್ದರು.
ಕೊರಟಿಗೆರೆಯಲ್ಲಿ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿ ಅಡಿಕೆ ತೋಟಕ್ಕೆ ಉರುಳಿ ತಲೆಕೆಳಗಾಗಿ ಬಿದ್ದಿದ್ದು ದಯಾನಂದ ಸ್ಥಳದಲ್ಲೇ ಮೃತರಾದರು.
ಸ್ಥಳಕ್ಕೆ ಬೇಲೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.