ಸಾಲಮರುಪಾವತಿ ವಿಳಂಬ ಮಾಡಿದ್ದಕ್ಕೆ ಮನೆ ಸೀಜ್ ಮಾಡಿ ಕುಟುಂಬವನ್ನು ಕೊಟ್ಟಿಗೆಯಲ್ಲಿ ವಾಸಿಸುವ ಸ್ಥಿತಿಗೆ ತಂದಿಟ್ಟ ಮೈಕ್ರೋಫೈನಾನ್ಸ್ ಕಂಪೆನಿ!

ಹಾಸನ: ತಾಲ್ಲೂಕಿನ ದೊಡ್ಡ ಆಲದಹಳ್ಳಿ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿ ಸಾಲ ಮರುಪಾವತಿಸದ ಕುಟುಂಬವೊಂದನ್ನು ಮನೆಯಿಂದ ಹೊರಹಾಕಿ ಅವರು ತಿಂಗಳುಗಳಿಂದ ಕೊಟ್ಟಿಗೆಯಲ್ಲಿ ಜೀವನ ನಡೆಸುತ್ತಿದ್ದ ವಿಷಯ ಬೆಳಕಿಗೆ ಬಂದಿದ್ದು, ರೈತ ಸಂಘದ ಕಾರ್ಯಕರ್ತರು ಮಂಗಳವಾರ ಫೈನಾನ್ಸ್ ಕಂಪೆನಿ ಹಾಕಿದ್ದ ಬೀಗ ಒಡೆದು ಕುಟುಂಬವನ್ನು ಮನೆಯೊಳಗೆ ಸೇರಿಸಿದೆ.

ಮಂಜೇಗೌಡ ಎಂಬುವರು ಮನೆ ನಿರ್ಮಾಣಕ್ಕಾಗಿ ಪಡೆದ ₹9 ಲಕ್ಷ ಸಾಲವನ್ನು ಮರುಪಾವತಿ ಮಾಡಲು ವಿಳಂಬವಾದ ಕಾರಣ, ಆಧಾರ್ ಹೌಸಿಂಗ್ ಫೈನಾನ್ಸ್ ಸಂಸ್ಥೆಯು ಮನೆಗೆ ಬೀಗ ಹಾಕಿ ಕುಟುಂಬವನ್ನು ಬೀದಿಗಟ್ಟಿತ್ತು.

ಮನೆ ನಿರ್ಮಾಣದ ವೇಳೆಯೇ ಮಂಜೇಗೌಡ ಅವರ ಮಗ ಅಪಘಾತಕ್ಕೀಡಾದ ಕಾರಣ, ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ಸಾಲ ಕಟ್ಟಲು ಸಾಧ್ಯವಾಗದೆ ಇದ್ದ ಹಿನ್ನೆಲೆಯಲ್ಲಿ, ಆರು ತಿಂಗಳ ಹಿಂದೆ ಕಂಪನಿ, ಮನೆಯನ್ನು ಸೀಜ್ ಮಾಡಿತ್ತು. ಮನೆಯಿಲ್ಲದೆ ನಿರಾಶ್ರಿತರಾಗಿ, ಮಂಜೇಗೌಡ ಕುಟುಂಬವು ಕೊಟ್ಟಿಗೆಯಲ್ಲಿ ವಾಸಿಸುತ್ತಿತ್ತು.

ಈ ಈ ವಿಷಯ ಗಮನಕ್ಕೆ ಬಂದ ನಂತರ ರೈತ ಸಂಘದ ಮುಖಂಡರು ಮಂಗಳವಾರ ಬೆಳಗೆ ದಿಢೀರ್ ಪ್ರತಿರೋಧ ತೋರಿದರು. ಮುಖಂಡ ಕಣಗಾಲ್‌ಮೂರ್ತಿ ನೇತೃತ್ವದಲ್ಲಿ ರೈತ ಸಂಘದ ಕಾರ್ಯಕರ್ತರು ಮಂಜೇಗೌಡ ಅವರ ಮನೆಯ ಬೀಗ ಮುರಿದು, ಕುಟುಂಬವನ್ನು ಮತ್ತೆ ತಮ್ಮ ಮನೆಯೊಳಗೆ ಸೇರಿಸಿದರು.

ಮೈಕ್ರೋ ಫೈನಾನ್ಸ್ ಸಂಸ್ಥೆಯ ಇಂತಹ ಅಮಾನುಷ ಕಾರ್ಯವೈಖರಿಗೆ ಸಾರ್ವಜನಿಕ ವಲಯದಿಂದ ಭಾರೀ ಟೀಕೆ ವ್ಯಕ್ತವಾಗುತ್ತಿದೆ.