ವಿಡಿಯೋ: ಆಫ್ ರೋಡ್ ಜೀಪ್ ರೇಸ್ ಸದ್ದಿಗೆ ಬೆಚ್ಚಿದ ಕಾಡಾನೆ: ಆನೆ ತುಳಿತದಿಂದ ಕೂದಲೆಳೆ ಅಂತರದಲ್ಲಿ ಯುವಕ ಪಾರಾದ ರೋಚಕ ದೃಶ್ಯ!

ಹಾಸನ, ಏಪ್ರಿಲ್ 14: ಸಕಲೇಶಪುರ ತಾಲ್ಲೂಕಿನ ಬೆಳ್ಳೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಭಾನುವಾರ ಕಾಡಾನೆ ದಾಳಿಯ ಆತಂಕಕಾರಿಯಾದ ಘಟನೆಯೊಂದು ನಡೆದಿದೆ.

ಅರಣ್ಯ ಇಲಾಖೆಯ ಅನುಮತಿಯಿಲ್ಲದೆ ಅನಧಿಕೃತವಾಗಿ ನಡೆದ ಜೀಪ್ ರೇಸ್‌ನ ಮಧ್ಯೆ ದಿಢೀರ್ ಕಾಡಾನೆಯೊಂದು ಸ್ಥಳಕ್ಕೆ ಲಗ್ಗೆ ಇಟ್ಟಿದ್ದು, ಕೂದಲೆಳೆ ಅಂತರದಲ್ಲಿ ಭಾರಿ ಅನಾಹುತವೊಂದು ತಪ್ಪಿದೆ.

ಕೆಳಗಿನ ಲಿಂಕ್ ಬಳಸಿ ವಿಡಿಯೋ ವೀಕ್ಷಿಸಿ

ಕೇರಳ ಮೂಲದ ತಂಡವೊಂದು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ಬಯಲಿನಲ್ಲಿ ಹತ್ತಕ್ಕೂ ಹೆಚ್ಚು ಜೀಪ್‌ಗಳೊಂದಿಗೆ ಟೆಂಟ್‌ಗಳನ್ನು ಹಾಕಿ ಆಫ್ ರೋಡ್ ರೇಸ್ ಆಯೋಜಿಸಿತ್ತು.

ರೇಸ್ ಆರಂಭವಾದ ಕೆಲವೇ ಕ್ಷಣಗಳಲ್ಲಿ ದೈತ್ಯಾಕಾರದ ಒಂಟಿ ಸಲಗವೊಂದು ಜೀಪ್‌ಗಳ ಸದ್ದಿಗೆ ಹೆದರಿ ಓಡಿಬಂದು ಸ್ಥಳದಲ್ಲಿ ಗೊಂದಲ ಸೃಷ್ಟಿಸಿತು. ಈ ವೇಳೆ ಕೇರಳ ಮೂಲದ ವ್ಯಕ್ತಿಯೊಬ್ಬನನ್ನು ಕಾಡಾನೆ ಅಟ್ಟಾಡಿದ್ದು, ತನ್ನ ಸೊಂಡಿಲಿನಿಂದ ತಿವಿದು, ಕಾಲಿನಿಂದ‌ ತುಳಿಯಲು ಯತ್ನಿಸಿತು.

ಆದರೆ, ಸ್ಥಳದಲ್ಲಿದ್ದವರು ಜೋರಾಗಿ ಕೂಗಾಡಿದ್ದರಿಂದ ಕಾಡಾನೆ ಗಾಬರಿಯಾಗಿ ಸ್ಥಳದಿಂದ ಕಾಲ್ಕಿತ್ತು. ಈ ಘಟನೆಯಲ್ಲಿ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಜೀಪ್‌ಗಳ ಗದ್ದಲಕ್ಕೆ ಕಾಡಾನೆ ಓಡಿಬಂದಿರುವ ಸಾಧ್ಯತೆಯಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅನುಮತಿಯಿಲ್ಲದೆ ರೇಸ್ ಆಯೋಜಿಸಿದ್ದಕ್ಕೆ ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಅವರು ಹೇಳಿದ್ದಾರೆ. ಈ ಘಟನೆಯಿಂದಾಗಿ ಸ್ಥಳೀಯರು ಅರಣ್ಯ ಹಾಗೂ ಕಂದಾಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಕಾಡಿನಲ್ಲಿ ಇಂತಹ ಚಟುವಟಿಕೆಗಳಿಗೆ ಅವಕಾಶ ನೀಡಿದರೆ ವನ್ಯಜೀವಿಗಳಿಗೆ ಮಾತ್ರವಲ್ಲ, ಮನುಷ್ಯರಿಗೂ ಅಪಾಯ ತಪ್ಪಿದ್ದಲ್ಲ,” ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಘಟನೆಯ ದೃಶ್ಯಗಳು ಸ್ಥಳದಲ್ಲಿದ್ದವರಲ್ಲಿ ಎದೆ ಝಲ್ ಎನ್ನಿಸುವಂತೆ ಮಾಡಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ.