ಹಾಸನ: ಅರಕಲಗೂಡು ಪಟ್ಟಣದ ಕೋಟೆ ಬೀದಿಯಲ್ಲಿ ಜಮೀನು ವಿಚಾರವಾಗಿ ಎರಡು ಕುಟುಂಬಗಳ ನಡುವೆ ಜಗಳ ತಾರಕಕ್ಕೇರಿದ್ದು, ಈ ವೇಳೆ ಮೂವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ವಿಷ ಸೇವಿಸಿದ ದಿವ್ಯ (25), ಸುಮಂತ್ (30), ಮತ್ತು ಶಿವಮ್ಮ (55) ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ದಿವ್ಯ ಸ್ಥಿತಿ ಗಂಭೀರವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶಿವಮ್ಮ ಮತ್ತು ಸುಮಂತ್ ಅವರನ್ನು ಅರಕಲಗೂಡು ಆಸ್ಪತ್ರೆಗೆ ದಾಖಲಿಸಲಾಗಿದೆ.
ಏನಾಯಿತು?:
ಆರು ವರ್ಷಗಳ ಹಿಂದೆ ಬಿಎಂಟಿಸಿ ನಿವೃತ್ತ ನೌಕರ ಮಂಜುನಾಥ್ ಅವರು ಕಾಂತರಾಜು ಕುಟುಂಬಕ್ಕೆ ನಾಲ್ಕು ಲಕ್ಷ ರೂಪಾಯಿ ಸಾಲ ನೀಡಿದ್ದರು. ಈ ಸಾಲಕ್ಕಾಗಿ ಕಾಂತರಾಜು ತಮ್ಮ ವಾರಸನಹಳ್ಳಿಕೊಪ್ಪಲು ಬಳಿಯ ನಾಲ್ಕು ಎಕರೆ ಜಮೀನು ಮಂಜುನಾಥ್‌ಗೆ ಸ್ವಾಧೀನ ಕ್ರಯ ಮಾಡಿಕೊಟ್ಟಿದ್ದರು.
ಆದರೆ, ಸಾಲಗಾರ ಕಾಂತರಾಜು ಮೃತಪಟ್ಟ ನಂತರ, ಅವರ ಕುಟುಂಬಸ್ಥರು ಸಾಲ ಮರುಪಾವತಿಸಿ ಜಮೀನು ವಾಪಾಸ್ ನೀಡುವಂತೆ ಮಂಜುನಾಥ್ ಅವರನ್ನು ಒತ್ತಾಯಿಸುತ್ತಿದ್ದರು. ಆದರೆ ಮಂಜುನಾಥ್ ಜಮೀನು ಬಿಟ್ಟುಕೊಡಲು ನಿರಾಕರಿಸಿದ್ದರು.
ಆತ್ಮಹತ್ಯೆಗೆ ಯತ್ನ:
ನಿನ್ನೆ ಈ ವಿಷಯ ಕುರಿತಾಗಿ ಎರಡು ಕುಟುಂಬಗಳ ನಡುವೆ ನಡೆದ ತೀವ್ರ ಜಗಳ ತಾರಕಕ್ಕೇರಿತ್ತು. ಇದರಿಂದ ನೊಂದು ಕಾಂತರಾಜು ಕುಟುಂಬದ ಮೂವರು, ಮಂಜುನಾಥ್ ಅವರ ಮನೆಯ ಮುಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು.
ಸ್ಥಳಕ್ಕೆ ಪೊಲೀಸರ ಭೇಟಿ:
ಘಟನೆಯ ನಂತರ, ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಿ. ಕಾಂತರಾಜು ಅವರ ಹಿರಿಯ ಪುತ್ರ ನಂಜುಂಡೇಗೌಡ ಈ ಕುರಿತು ಅರಕಲಗೂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.