ಹುಡಾ ನೂತನ ಬಡಾವಣೆಯಲ್ಲಿ ಪತ್ರಕರ್ತರಿಗೆ ನಿವೇಶನ ಹಂಚಿಕೆ ಕೋರಿ ಸಚಿವ ಬೈರತಿ ಸುರೇಶ್ ಗೆ ಮನವಿ ಸಲ್ಲಿಸಿದ ಹಾಸನ ಪತ್ರಕರ್ತರ ನಿಯೋಗ

ಪತ್ರಕರ್ತರ ಮನವಿಗೆ ಸ್ಪಂದಿಸಿದ ಸಚಿವ| ಕ್ರಮದ ಭರವಸೆ

ಹಾಸನ: ಹುಡಾ ವತಿಯಿಂದ ನಗರ ಹೊರವಲಯದಲ್ಲಿ ನಿರ್ಮಿಸುತ್ತಿರುವ ಬಿಜಿಎಸ್ ಬಡಾವಣೆಯಲ್ಲಿ ಪತ್ರಕರ್ತರಿಗೆ ನಿವೇಶನ ಹಂಚಿಕೆ ಮಾಡುವಂತೆ ಕೋರಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೆ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿಯೋಗ ಇಂದು ಮನವಿ ಸಲ್ಲಿಸಿತು.

ಚಿಕ್ಕಮಗಳೂರಿನಲ್ಲಿ ಸಚಿವರನ್ನು ಭೇಟಿಯಾದ ಪತ್ರಕರ್ತರು, ಈ ಹಿಂದೆ ಹುಡಾದಿಂದ ನಿವೇಶನ ಹಂಚಿಕೆಗೆ ಅರ್ಜಿ ಆಹ್ವಾನಿಸಿದಾಗ ಪತ್ರಕರ್ತರಿಗೆ ಆದ್ಯತೆ ಮೇರೆಗೆ ನಿವೇಶನ ಹಂಚಿಕೆ ಮಾಡುವುದಾಗಿ ಹಿಂದಿನ‌ ಸರ್ಕಾರದಲ್ಲಿ ಭರವಸೆ ಸಿಕ್ಕಿತ್ತು. ಹೀಗಾಗಿ ಹಾಸನದ ಪತ್ರಕರ್ತರು ನಿವೇಶನಕ್ಕೆ ಮುಂಗಡ ಪಾವತಿಸಿ ಅರ್ಜಿ ಸಲ್ಲಿಸಿದ್ದರು.

ಹಾಸನದಲ್ಲಿಯೂ ತಮ್ಮನ್ನು ಭೇಟಿಯಾಗಿ ಈ ಬಗ್ಗೆ ಗಮನ ಸೆಳೆದಿದ್ದೆವು. ಈಗ ನಿವೇಶನಗಳ ಹಂಚಿಕೆಗೆ ಸಿದ್ಧತೆ ನಡೆದಿದೆ. ಆದ್ದರಿಂದ ತಾವು ಬಿಜಿಎಸ್ ಬಡಾವಣೆಯಲ್ಲಿ ಪತ್ರಕರ್ತರಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಮನವಿ ಸಲ್ಲಿಸಿದರು.

ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಈ ಬಗ್ಗೆ ಶೀಘ್ರವೇ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಚ್.ವೇಣುಕುಮಾರ್, ರಾಜ್ಯ ಸಮಿತಿ ಸದಸ್ಯ ಎಚ್.ಬಿ.ಮದನಗೌಡ, ವಿಶೇಷ ಆಹ್ವಾನಿತ ರವಿನಾಕಲಗೂಡು, ಉಪಾಧ್ಯಕ್ಷ ಕೆ.ಎಂ.ಹರೀಶ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಡಿ.ಐ. ಖುಷ್ವಂತ್, ಕೆ.ಎಂ.ಮಂಜುನಾಥ್ ಇದ್ದರು.