ಸಕಲೇಶಪುರದಲ್ಲಿ ಡ್ರಗ್ಸ್ ದಂಧೆ ಕಡಿವಾಣಕ್ಕೆ ಇನ್ನಷ್ಟು ಕಠಿಣ ಕ್ರಮಕೈಗೊಳ್ಳಿ; ಎಸ್ಪಿಗೆ ಎಚ್.ಎಂ.ವಿಶ್ವನಾಥ್ ನಿಯೋಗದ ಮನವಿ

ಹಾಸನ: ಸಕಲೇಶಪುರದಲ್ಲಿ ಡ್ರಗ್ಸ್ ದಂಧೆ ನಿರ್ಮೂಲನೆಗೆ  ಇನ್ನಷ್ಟು ಕ್ರಮಕೈಗೊಳ್ಳುವಂತೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜಿತಾ ಅವರಿಗೆ ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ನೇತೃತ್ವದ ನಿಯೋಗ ಮನವಿ ಸಲ್ಲಿಸಿತು.

ಅಮಲು ಮುಕ್ತ ಭಾರತ ಆಂದೋಲನ ದೇಶವ್ಯಾಪಿಯಾಗಿ ನಡೆಯುತ್ತಿದ್ದು ಇದಕ್ಕೆ ಪೂರಕವಾಗಿ ಸಕಲೇಶಪುರದಲ್ಲಿ ಚಾಲನೆ ನೀಡಲಾಗಿದೆ. ಹಲವಾರು ಕಾರ್ಯಕ್ರಮಗಳನ್ನು ಈಗಾಗಲೇ ಹಮ್ಮಿಕೊಳ್ಳಲಾಗಿದೆ.

ಸಕಲೇಶಪುರದಲ್ಲಿ ಡ್ರಗ್ಸ್ ದಂಧೆ ಬಹಳ ಪ್ರಬಲವಾಗಿ ನಡೆಯುತ್ತಿದೆ, ಇದಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಸಹಕಾರ ನೀಡುತ್ತಿದೆ. ಅನೇಕ ಪ್ರಕರಣ ದಾಖಲಿಸಿದ್ದಾರೆ. ದಂಧೆ ನಿಯಂತ್ರಣಕ್ಕೆ ಇನ್ನಷ್ಟು ಕ್ರಮ ಅಗತ್ಯವಾಗಿದೆ.

ಸಕಲೇಶಪುರ ತಾಲೂಕಿಗೆ ಸಂಬಂಧಿಸಿಂತೆ ಡ್ರಗ್ಸ್ ದಂಧೆ ವಿರುದ್ಧ ದಿನದ 24 ಗಂಟೆ ಕಾರ್ಯನಿರ್ವಹಿಸಲು ವಿಶೇಷ ಪಡೆಯನ್ನು ರಚಿಸಬೇಕು, ಜತೆಗೆ ಡ್ರಗ್ಸ್ ದಂಧೆಕೋರರ ಮಾಹಿತಿ ಸಂಗ್ರಹಣೆಗೆ ಸಹಾಯವಾಣಿ ತೆರಯಬೇಕು. ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಸ್ವಯಂಸೇವಕರು ಡ್ರಗ್ಸ್ ದಂಧೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ ವ್ಯಕ್ತಿಗಳ ವಿಚಾರಣೆ ನಡೆಸಬೇಕು ಎಂದು  ಮನವಿ ಮಾಡಿದರು.

 ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ನೇತೃತ್ವದ ನಿಯೋಗದಲ್ಲಿ ಹಿರಿಯ ಹೋರಾಟಗಾರ ನಾರಾಯಣ ಆಳ್ವ, ನಾಗರಿಕ ಸಂರಕ್ಷಣಾ ಸಮಿತಿ ಅಧ್ಯಕ್ಷ ರವಿಕುಮಾರ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜೈ ಭೀಮ್ ಮಂಜು, ಹಿರಿಯ ಪತ್ರಕರ್ತರಾದ ಸಾ.ಸು. ವಿಶ್ವನಾಥ್, ಮಲ್ನಾಡ್ ಮೆಹಬೂಬ್ ಇದ್ದರು.