ಡೆಂಗ್ಯೂಗೆ ಏಳು ವರ್ಷದ ಶಾಲಾ ಬಾಲಕಿ ಬಲಿ

ಹಾಸನ: ಡೆಂಗ್ಯೂ ಮಹಾಮಾರಿಗೆ ಮುದ್ದಾದ ಬಾಲಕಿ ಬಲಿಯಾಗಿದ್ದಾಳೆ.

ನಗರದ ಬೆಥನಿ ಸೆಂಟ್ರಲ್ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದ ಸಾತ್ವಿಕ(7) ಮೃತ ಬಾಲಕಿ.

ಬಂಡಿಹಳ್ಳಿ ಗ್ರಾಮದ ಉಪನ್ಯಾಸಕ ಗಂಗಾಧರ್ ಎಂಬುವರ ಪುತ್ರಿಯಾಗಿದ್ದ ಸಾತ್ವಿಕ, ಕಳೆದ ಮೂರ್ನಾಲ್ಕು ದಿನದಿಂದ ಜ್ವರದಿಂದ ಬಳಲುತ್ತಿದ್ದಳು. ಕೂಡಲೇ ಖಾಸಗಿ ನರ್ಸಿಂಗ್ ಹೋಂಗೆ ದಾಖಲು ಮಾಡಲಾಗಿತ್ತು.

ಆದರೆ ಜ್ವರ ಹೆಚ್ಚಾಗಿದ್ದರಿಂದ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಹಿಮ್ಸ್ ದಾಖಲಿಸಲಾಗಿತ್ತು. ಆದರೆ
ಚಿಕಿತ್ಸೆ ಫಲಕಾರಿಯಾಗದೆ ಸಾತ್ವಿಕ ಕೊನೆಯುಸಿರೆಳೆದಳು.

ಅಲ್ಲಿಗೆ ಬಾಳಿ ಬದುಕಬೇಕಾಗಿದ್ದ ಬಾಲಕಿಯ ಜೀವನ ೭ನೇ ವಯಸ್ಸಿಗೇ ಕೊನೆಯಾಗಿರುವುದು ಹೆತ್ತವರಲ್ಲಿ ತಡೆಯಲಾಗದಷ್ಟು ದುಃಖ, ಕಣ್ಣೀರು ತರಿಸಿದೆ.

ಸಾತ್ವಿಕ ದುರಂತ ಸಾವು ಹಿನ್ನೆಲೆ ಇಂದು ನಡೆಯಬೇಕಿದ್ದ ಎಲ್ಲಾ ಪರೀಕ್ಷೆ ರದ್ದುಗೊಳಿಸಿದ ಶಾಲೆಯ ಆಡಳಿತ ಮಂಡಳಿ, ಶಾಲೆಗೆ ರಜೆ ನೀಡಿ ಗೌರವ ಸೂಚಿಸಿತು.