ಮೃತ ಸಹೋದ್ಯೋಗಿ ಮರಣೋತ್ತರ ವರದಿ ಪಡೆಯಲು ಜಮ್ಮುವಿನಿಂದ ಬಂದಿದ್ದ ಯೋಧ ಅನಾರೋಗ್ಯಕ್ಕೆ ಬಲಿ

ಹಾಸನ: ಮೃತ ಸಹೋದ್ಯೋಗಿಯ ಮರಣೋತ್ತರ ವರದಿ ಸಂಗ್ರಹಿಸಲು ಬಂದ ಸಿಆರ್ಪಿಎಫ್ ಯೋಧರೊಬ್ಬರು ಹೊಳೆನರಸೀಪುರದಲ್ಲಿ ಹಠಾತ್ ಅನಾರೋಗ್ಯಕ್ಕೆ ಬಲಿಯಾಗಿದ್ದು, ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎನ್ನುವ ಆರೋಪ ಕೇಳಿ ಬಂದಿದೆ.

ರವಿಶಂಕರ್.ಎಂ.ಆರ್‌. (39) ಮೃತ ಯೋಧ. ವೈದ್ಯರ ನಿರ್ಲಕ್ಷ್ಯದಿಂದ ಯೋಧ ಸಾವನ್ನಪ್ಪಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಜಮ್ಮುವಿನಲ್ಲಿ ಕರ್ತವ್ಯದಲ್ಲಿದ್ದ ಹೊಳೆನರಸೀಪುರ ಮೂಲದ ಯೋಧ ರವಿಶಂಕರ್, ಅರಸೀಕೆರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದ ಯೋಧನ ವರದಿ ಸಂಗ್ರಹಿಸಿಕೊಂಡೊಯ್ಯಲು ವಾರದ ಹಿಂದೆ ಕರ್ತವ್ಯದ ಮೇಲೆ ಬಂದಿದ್ದರು. ತಮ್ಮ ಹೊಳೆನರಸೀಪುರದ ನಿವಾಸದಲ್ಲಿ ಉಳಿದುಕೊಂಡಿದ್ದರು. ಅವರು ಇಂದು ಜಮ್ಮುವಿಗೆ ಮರಳಬೇಕಿತ್ತು.

ನಿನ್ನೆ ಜ್ವರ, ಸುಸ್ತು, ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹೊಳೆನರಸೀಪುರದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬಂದಿದ್ದ ಅವರನ್ನು ಪೂರ್ಣವಾಗಿ ತಪಾಸಣೆಗೊಳಪಡಿದ ವೈದ್ಯರು ಕೇವಲ ಮಾತ್ರೆ ನೀಡಿ ಕಳುಹಿಸಿದ್ದರು.

ಆದರೆ ಮನೆಗೆ ತೆರಳುತ್ತಿದ್ದಂತೆ ಯೋಧ ಮೃತಪಟ್ಟಿದ್ದಾರೆ. ಸರಿಯಾದ ಚಿಕಿತ್ಸೆ ನೀಡದೆ ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ ಎಂದು ಮೃತ ಯೋಧನ ಕುಟುಂಬಸ್ಥರು ಆರೋಪಿಸಿದ್ದಾರೆ. ತಾಲ್ಲೂಕು ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.