ಶಿವಲಿಂಗೇಗೌಡ ವೈರಲ್ ಆಡಿಯೋ: ತನಿಖೆಗೆ ಆಗ್ರಹಿಸಿ ಎಸ್ಪಿಗೆ ಜೆಡಿಎಸ್ ದೂರು

ಹಾಸನ:ಲೋಕಸಭಾ ಚುನಾವಣೆ ವೇಳೆ ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ನೀತಿಸಂಹಿತೆ ಉಲ್ಲಂಘನೆಯ ಮಾತುಗಳನ್ನಾಡಿರುವ ಆಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಅದರ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ಜೆಡಿಎಸ್ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಇಂದು ದೂರು ಸಲ್ಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್. ಲಿಂಗೇಶ್, ಕಳೆದ ಲೋಕಸಭೆ ಚುನಾವಣೆ ವೇಳೆ ವಾಮ ಮಾರ್ಗದಿಂದ ಚುನಾವಣೆ ನೀತಿಸಂಹಿತೆ ಉಲ್ಲಂಘಿಸಿ ಚುನಾವಣೆ ಗೆದ್ದಿರುವುದು ಇತ್ತೀಚೆಗೆ ವೈರಲ್ ಆಗಿರುವ ಅರಸೀಕೆರೆ ಶಾಸಕ ಕೆ.ಎಂ ಶಿವಲಿಂಗೇಗೌಡ ಅವರ ಆಡಿಯೋ ದಿಂದ ಬಹಿರಂಗವಾಗಿದೆ.

ಸಂಸದ ಶ್ರೇಯಸ್ ಪಟೇಲ್, ಗೃಹಮಂಡಳಿ ಅಧ್ಯಕ್ಷ ಶಿವಲಿಂಗೇಗೌಡ, ಮಾಜಿ ಸಚಿವ ಬಿ.ಶಿವರಾಂ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ ಗೋಪಾಲಸ್ವಾಮಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ರಾಜ್ಯಸಭಾ ಸದಸ್ಯ ಚಂದ್ರಶೇಖರ್ ಸೇರಿದಂತೆ ಹಲವರು ಕೋಟ್ಯಂತರ ರೂಪಾಯಿ ಹಣ ಹಂಚಿಕೆಯಲ್ಲಿ ಭಾಗಿಯಾಗಿರುವ ಬಗ್ಗೆ ವೈರಲ್ ಆಗಿರುವ ಆಡಿಯೋದಲ್ಲಿ ಉಲ್ಲೇಖ ವಾಗಿದೆ.

ಚುನಾವಣಾ ಆಯೋಗ ಇಡೀ ಸೇರಿದಂತೆ ಇತರ ತನಿಖಾ ಸಂಸ್ಥೆಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಮತದಾರರಿಗೆ ಹಣ ಹಂಚಿರುವ ಬಗ್ಗೆ ಆಡಿಯೋದಲ್ಲಿ ದಾಖಲೆಗಳಿವೆ. ಜೊತೆಗೆ ಪ್ರತಿಯೊಬ್ಬರೂ ಕೋಟ್ಯಂತರ ರೂಪಾಯಿ ಹಣ ಹಂಚಿಕೆಗೆ ಬಳಸಿದ್ದಾರೆ. ಅವರೆಲ್ಲರಿಗೂ ಹಣ ಹೇಗೆ ಬಂತು ಎಂಬ ಬಗ್ಗೆ ತನಿಖೆ ನಡೆಸಬೇಕು ಜತೆಗೆ ಚುನಾವಣಾ ಆಯೋಗದ ನೀತಿ ನಿಯಮಗಳನ್ನು ಗಾಳಿಗೆ ತೂರಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ವೇಳೆ ಜೆಡಿಎಸ್  ವಕ್ತಾರ ಹೊಂಗೆರೆ ರಘು , ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ವಕೀಲ ಪೂರ್ಣಚಂದ್ರ ತೇಜಸ್ವಿ ಇತರರು ಇದ್ದರು.