ಹಾಸನ: ಅರಕಲಗೂಡು ತಾಲ್ಲೂಕಿನ ಶಣವಿನಕುಪ್ಪೆ ಗ್ರಾಮದಲ್ಲಿ ಶ್ರೀ ಆಂಜನೇಯಸ್ವಾಮಿ ದೇವಾಲಯಕ್ಕೆ ಸೇರಿದ ಜಾಗವನ್ನು ಅಕ್ರಮವಾಗಿ ಇ-ಖಾತೆ ಮಾಡಿರುವ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಗ್ರಾಮದ ಎರಡು ಗುಂಪುಗಳ ನಡುವೆ ಭಾನುವಾರ ಘರ್ಷಣೆ ನಡೆದಿದೆ. ಸ್ಥಳಕ್ಕೆ ಆಗಮಿಸಿದ್ದ ಅಧಿಕಾರಿಗಳನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.
ಗ್ರಾಮ ಪಂಚಾಯಿತಿಯ ಪಿಡಿಒ ದೇವಸ್ಥಾನದ ಜಾಗವನ್ನು ಹಾಲು ಉತ್ಪಾದಕರ ಮಹಿಳಾ ಸಂಘದ ಕಟ್ಟಡ ನಿರ್ಮಾಣಕ್ಕಾಗಿ ಇ-ಖಾತೆ ಮಾಡಿಕೊಟ್ಟಿದ್ದಾರೆ ಎಂದು ಕೆಲವು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಆರೋಪದ ಬಗ್ಗೆ ಸ್ಥಳ ಪರಿಶೀಲನೆಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ಆಗಮಿಸಿದ್ದರು. ಈ ವೇಳೆ ಗ್ರಾಮದ ಒಂದು ಬಣದವರು ನಿರ್ಮಿಸಲಾಗಿದ್ದ ತಾತ್ಕಾಲಿಕ ಶೆಡ್‌ನ್ನು ಕಿತ್ತೆಸೆಯಲು ಮುಂದಾದಾಗ, ಇದಕ್ಕೆ ಮತ್ತೊಂದು ಗುಂಪು ತೀವ್ರ ವಿರೋಧ ವ್ಯಕ್ತಪಡಿಸಿತು.
ಮಾತಿಗೆ ಮಾತು ಬೆಳೆದು ಎರಡೂ ಗುಂಪುಗಳು ಪರಸ್ಪರ ಕೈ ಕೈ ಮಿಲಾಯಿಸಿದವು. ಅಧಿಕಾರಿಗಳು ಮತ್ತು ಪೊಲೀಸರ ಸಮ್ಮುಖದಲ್ಲೇ ಗ್ರಾಮಸ್ಥರು ಬಡಿದಾಡಿಕೊಂಡ ಘಟನೆ ನಡೆದಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಈ ಘಟನೆ ಅರಕಲಗೂಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು. ಗ್ರಾಮಸ್ಥರ ಆಕ್ರೋಶ ಹೆಚ್ಚಾಗಿದ್ದು, ದೇವಸ್ಥಾನದ ಜಾಗದ ಸ್ವಾಧೀನಕ್ಕೆ ಸಂಬಂಧಿಸಿದಂತೆ ಸರಿಯಾದ ತನಿಖೆಗೆ ಒತ್ತಾಯಿಸಲಾಗಿದೆ.