ಸಿಸಿಟಿವಿ ದೃಶ್ಯ; ಸಾಕುನಾಯಿ ಹೊತ್ತೊಯ್ಯಲು ಮನೆ ಬಾಗಿಲಿಗೇ ಬಂದ ಚಿರತೆ!

ಹಾಸನ, ಏಪ್ರಿಲ್ 01: ಹಾಸನ ತಾಲ್ಲೂಕಿನ ದೇವಿಹಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ತಿಮ್ಮೇಗೌಡ ಎಂಬುವವರ ತೋಟದ ಮನೆಯ ಬಾಗಿಲಿಗೆ ಚಿರತೆಯೊಂದು ಬಂದಿದ್ದು,  ಸಾಕು ನಾಯಿ ಹೊತ್ತೊಯ್ಯಲು ಹೊಂಚು ಹಾಕಿದ್ದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮನೆಯೊಳಗಿದ್ದ ನಾಯಿ ಚಿರತೆಯನ್ನು ಕಂಡು ಜೋರಾಗಿ ಬೊಗುಳತೊಡಗಿತು. ಈ ಶಬ್ದಕ್ಕೆ ಗಾಬರಿಗೊಂಡ ಚಿರತೆ ಕೂಡಲೇ ಓಡಿ ಪರಾರಿಯಾಯಿತು. ಈ ಘಟನೆಯ ಸಂಪೂರ್ಣ ದೃಶ್ಯ ಮನೆಯ ಬಳಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ದೇವಿಹಳ್ಳಿ ಹಾಗೂ ಸಮೀಪದ ಶಾಂತಿಗ್ರಾಮ ಪ್ರದೇಶಗಳಲ್ಲಿ ಕಳೆದ ಕೆಲ ದಿನಗಳಿಂದ ಚಿರತೆಯ ಓಡಾಟ ಹೆಚ್ಚಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. “ರಾತ್ರಿ ವೇಳೆ ಮನೆಯಿಂದ ಹೊರಗೆ ಬರಲು ಭಯವಾಗುತ್ತಿದೆ. ಚಿರತೆಯನ್ನು ಬೋನಿಟ್ಟು ಸೆರೆಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು” ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಸಿಬ್ಬಂದಿ, ಚಿರತೆಯ ಚಲನವಲನವನ್ನು ಗಮನಿಸುವುದಾಗಿ ತಿಳಿಸಿದ್ದಾರೆ. “ಗ್ರಾಮಸ್ಥರು ರಾತ್ರಿ ವೇಳೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ” ಎಂದು ಅಧಿಕಾರಿಗಳು ಹೇಳಿದ್ದಾರೆ.