ಬೆಳ್ಳಂಬೆಳಗ್ಗೆ ಕಾಡಿದ ದುರ್ವಿಧಿ; ಕಂದಲಿ ಸಮೀಪ ಅಪಘಾತದಲ್ಲಿ ಹೊಸಕೋಟೆ ಮೂಲದ 6 ಜನರ ಸಾವು

ನಿದ್ದೆ ಮಂಪರಿನಲ್ಲಿ ಕಾಡಿದ ಜವರಾಯ

ಹಾಸನ: ಟೊಯೋಟಾ ಇಟಿಯೋಸ್ ಕಾರು ಎರಡು ಲಾರಿಗಳ ನಡುವೆ ಸಿಲುಕಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮಹಿಳೆಯರು, ಮೂರು ಪುರುಷರು, ಒಂದು ಮಗು ಸೇರಿ ಕಾರಿನಲ್ಲಿದ್ದ ಒಂದೇ ಕುಟುಂಬದ ಎಲ್ಲ ಆರು ಜನರೂ ಸ್ಥಳದಲ್ಲೇ ಮೃತರಾದ ದಾರುಣ ಘಟನೆ ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ಕಂದಲಿ ಸಮೀಪದ ಇಂದು ಬೆಳಗಿನ ಜಾವ ನಡೆದಿದೆ.

ನಾರಾಯಣಪ್ಪ, ಸುನಂದಾ, ರವಿಕುಮಾರ್, ನೇತ್ರ,
ಚೇತನ್ (ಬಾಲಕ), ರಾಕೇಶ್ (ಡ್ರೈವರ್) ಮೃತರು. ಎಲ್ಲರೂ ಹೊಸಕೋಟೆ ತಾಲ್ಲೂಕಿನ, ಅಂದರಹಳ್ಳಿ ಹಾಗೂ ದೇವನಹಳ್ಳಿ ಬಳಿಯ ಕಾರಹಳ್ಳಿ ಮೂಲದವರು.

ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಬಂಧಿಕರನ್ನು ನೋಡಲು KA-53-C.1419 ನಂಬರ್‌ನ ಇಟಿಯೋಸ್ ಕಾರಿನಲ್ಲಿ ತೆರಳಿದ್ದ ಕುಟುಂಬ ಸದಸ್ಯರು ಹಿಂದಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ.

ಬೆಳಗಿನ ಜಾವ ನಿದ್ದೆ ಮಂಪರಿನಲ್ಲಿ ವಾಹನ ಡಿವೈಡರ್ ಗೆ ಡಿಕ್ಕಿ ಹೊಡೆದು ಪಕ್ಕದ ಲೇನ್ ಗೆ ಹಾರಿ ಕಂಟೇನರ್‌ಗೆ ಗುದ್ದಿದೆ. ಘಟನೆ ವಿವರ ಇನ್ನಷ್ಟೇ ತಿಳಿಯಬೇಕಿದೆ. ಅಪಘಾತದಲ್ಲಿ ಕಾರು ನುಜ್ಜುಗುಜ್ಜಾಗಿದ್ದು ಒಳಗೆ ಸಿಲುಕಿರುವ ಮೃತದೇಹಗಳನ್ನು ಹೊರ ತೆಗೆಯಲು ಪೊಲೀಸರು ಹರಸಾಹಸಪಡುತ್ತಿದ್ದಾರೆ.