ನಿಂತಿದ್ದ ಲಾರಿಗೆ ಹಿಂದಿನಿಂದ ಡಿಕ್ಕಿಯಾದ ಕಾರು; ಭೀಕರ ಅಪಘಾತಕ್ಕೆ ಇಬ್ಬರು ಬಲಿ

ಪಲ್ಟಿಯಾದ ಕಾರಿನ ಟಾಪ್ ಹಾರಿಹೋಯಿತು; ಹೋಟೆಲ್ ಪೂಜೆಗೆ ಹೊರಟವರು ಮಸಣಕ್ಕೆ

ಆಲೂರು:ತಮ್ಮ ಮಾಲೀಕರ ಹೊಸ ಹೋಟೆಲ್ ಪೂಜೆ ಸಂಭ್ರಮದಲ್ಲಿದ್ದ ಇಬ್ಬರು ನೌಕರರು ಸ್ಥಳ ತಲುಪುವ ಮೊದಲೇ ಇಹ ಲೋಕ ತ್ಯಜಿಸಿದ್ದಾರೆ.

ಟೈರ್ ಪಂಕ್ಚರ್ ಆಗಿ ಕೆಟ್ಟು ನಿಂತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ, ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಈಶ್ವರಹಳ್ಳಿ ಕೂಡಿಗೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮುಂಜಾನೆ ನಡೆದಿದೆ.

ಪಂಕ್ಚರ್ ಆಗಿ ನಿಂತಿದ್ದ ಲಾರಿ

ಹಾಸನ ಕೃಷ್ಣ ಹೋಟೆಲ್‌ನಲ್ಲಿ ಮ್ಯಾನೇಜರ್ ಆಗಿದ್ದ ಪ್ರದೀಪ್ (31)ಹಾಗೂ ಅದೇ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಗುರು (19) ಮೃತ ದುರ್ದೈಗಳಾಗಿದ್ದು, ಹೃತ್ವಿಕ್ ಮತ್ತು ಹರ್ಷಿತ್ ಎಂಬಿಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಘಟನೆ ವಿವರ:
ಪ್ರದೀಪ್ ಹಾಗೂ ತಮ್ಮೊಂದಿಗೆ ಕೆಲಸ ಮಾಡುತ್ತಿದ್ದ ಗುರು, ಹೃತ್ವಿಕ್, ಹರ್ಷಿತ್ ಅವರು ಈಶ್ವರಹಳ್ಳಿ ಬಳಿಯ ತಮ್ಮ ಮಾಲೀಕರ ಹೊಸ ಹೋಟೆಲ್ ಪೂಜೆಗೆಂದು ಇಂದು ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ಹಾಸನದಿಂದ ಕೆಎ-೧೩-ಎಂ-೬೪೧೪ ಸಂಖ್ಯೆಯ ಮಾರುತಿ ಝೆನ್ ಕಾರಿನಲ್ಲಿ ಹೊರಟಿದ್ದರು. ಹರ್ಷಿತ್ ಕಾರು ಚಾಲನೆ ಮಾಡುತ್ತಿದ್ದ.

ನುಜ್ಜುಗುಜ್ಜಾಗಿರುವ ಕಾರು

 

ಇದೇ ವೇಳೆಗೆ ದಟ್ಟವಾದ ಮಂಜು ಆವರಿಸಿತ್ತು. ಕಣದಹಳ್ಳಿ ಗ್ರಾಮದ ಎನ್.ಹೆಚ್ ೭೫ ರಲ್ಲಿ ಹೋಗುತ್ತಿದ್ದಾಗ ಹರ್ಷಿತ್ ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಹೋಗಿ ಬೆಳಗಿನ ಜಾವ ೪.೫೦ ರ ಸುಮಾರಿಗೆ ರಸ್ತೆಯ ಎಡಬದಿಯಲ್ಲಿ ಟೈರ್ ಪಂಕ್ಚರ್ ಆಗಿ ನಿಂತಿದ್ದ ಟಿಂಬರ್ ತುಂಬಿದ್ದ ಕೆಎ-೧೯-ಎಎ-೯೧೧೭ ಸಂಖ್ಯೆಯ ಲಾರಿಗೆ ಹಿಂದಿನಿಂದ ಗುದ್ದಿದ್ದಾನೆ.

ಕಾರಿನ ಎಡಭಾಗದ ಮಂದಿನ ಹಾಗೂ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕು ಮಾಲುಕೊಪ್ಪಲು ಗ್ರಾಮದ ಪ್ರದೀಪ್ ಹಾಗೂ ಚಾಮರಾಜನಗರ ಜಿಲ್ಲೆ ಕೊಟ್ಟಲವಾಡಿ ಗ್ರಾಮದ ಗುರು ಅವರ ತಲೆಗೆ ಹಾಗೂ ದೇಹದ ಭಾಗಗಳಿಗೆ ಗಂಭೀರ ಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಹಿಂಭಾಗದ ಸೀಟಿನಲ್ಲಿ ಕುಳಿತಿದ್ದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಹಾದನೂರು ಗ್ರಾಮದ ಹೃತ್ವಿಕ್(೧೯), ನಗರದ ಚನ್ನಪಟ್ಟಣದ ಕಾರು ಚಾಲಕ ಹರ್ಷಿತ್(೩೦) ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.