ಹಾಸನ; ಈ ಬಾರಿಯ ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ ಎಚ್.ಡಿ. ರೇವಣ್ಣ ಕಣಕ್ಕಿಳಿದಿದ್ದಾರೆ!
ಹೌದು, ಎಚ್.ಡಿ. ರೇವಣ್ಣ, ಪ್ರಜ್ವಲ್ ರೇವಣ್ಣ ಅವರಿಗೆ ಎದುರಾಳಿಯಾಗಿದ್ದಾರೆ. ಆದರೆ ಈ ರೇವಣ್ಣ, ಮಾಜಿ ಪ್ರಧಾನಿ ಹರದನಹಳ್ಳಿ ದೊಡ್ಡೇಗೌಡರ ಮಗ ರೇವಣ್ಣ ಅಲ್ಲ. ಇವರು ಚನ್ನರಾಯಪಟ್ಟಣ ತಾಲೂಕು ಕೋಡಿಹಳ್ಳಿಯ ದೊಡ್ಡೇಗೌಡ ಎಂಬವರ ಮಗ ರೇವಣ್ಣ.
ಈ ಹಿಂದಿನ ವಿಧಾನಸಭೆ ಚುನಾವಣೆಗಳಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ವಿರುದ್ಧ, ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ.ದೇವೇಗೌಡರ ವಿರುದ್ಧ ಸ್ಪರ್ಧಿಸುವ ಮೂಲಕ ಗಮನ ಸೆಳೆಯುತ್ತಿದ್ದ ಈ ಎಚ್.ಡಿ.ರೇವಣ್ಣ ಈಗ ಪ್ರಜ್ವಲ್ ರೇವಣ್ಣ ವಿರುದ್ಧ ಸ್ಪರ್ಧಿಸಲು ಶನಿವಾರ ನಾಮಪತ್ರ ಸಲ್ಲಿಸಿದರು.
ಪೂರ್ವಾಂಚಲ ಮಹಾಮಂಚಾಯತ್ ಎನ್ನುವ ಪಕ್ಷದ ಬಿ ಫಾರಂನೊಂದಿಗೆ ಅವರು ನಾಮಪತ್ರ ಸಲ್ಲಿಸಿದ್ದಾರೆ. ಮೇಲ್ನೋಟಕ್ಕೆ ಅಭ್ಯರ್ಥಿ ಪಟ್ಟಿ ನೋಡಿದವರಿಗೆ ಪ್ರಜ್ವಲ್ ವಿರುದ್ಧ ಅವರ ತಂದೆ ಎಚ್.ಡಿ.ರೇವಣ್ಣ ಅವರೇ ಸ್ಪರ್ಧಿಸಿದ್ದಾರೇನೋ ಎನ್ನುವ ಗೊಂದಲ ಮೂಡಿದರೆ ಅಚ್ಚರಿಯಿಲ್ಲ.