ಸಕಲೇಶಪುರ: ಮದರಸದಿಂದ ಮರಳುತ್ತಿದ್ದ ಬಾಲಕನ ಮೇಲೆ ಬೀದಿ‌ನಾಯಿಗಳ ದಾಳಿ

ಹಾಸನ, ಮೇ 17, 2025: ಸಕಲೇಶಪುರ ಪಟ್ಟಣದ ಕುಡುಗರಹಳ್ಳಿ ಬಡಾವಣೆಯಲ್ಲಿ ಶುಕ್ರವಾರ ಸಂಜೆ ಮದರಸದಿಂದ ಮನೆಗೆ ತೆರಳುತ್ತಿದ್ದ ಬಾಲಕನ ಮೇಲೆ ಏಕಾಏಕಿ ಬೀದಿ ನಾಯಿಗಳು ದಾಳಿ ಮಾಡಿದ್ದು, ಬಾಲಕನ ಮುಖ, ಕೈ, ಕಾಲು ಹಾಗೂ ಹೊಟ್ಟೆ ಭಾಗಗಳಿಗೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿವೆ.

ಶಾಹಿದ್ ಗಾಯಾಳು ಬಾಲಕ, ಶ್ವಾನಗಳಿಂದ ತಪ್ಪಿಸಿಕೊಳ್ಳಲು ಆತ ಹರಸಾಹಸಪಟ್ಟರೂ, ನಾಯಿಗಳು ದೇಹದ ವಿವಿಧ ಭಾಗಗಳಿಗೆ ಕಚ್ಚಿ ರಕ್ತಸ್ರಾವ ಉಂಟುಮಾಡಿವೆ. ಬಾಲಕನ ಕೂಗಾಟ ಕೇಳಿ ಓಡಿಬಂದ ಸ್ಥಳೀಯರು ಶ್ವಾನಗಳಿಂದ ಆತನನ್ನು ರಕ್ಷಿಸಿದರು. ತಕ್ಷಣವೇ ಗಾಯಾಳುವನ್ನು ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಜನರ ಆಕ್ರೋಶ: ಸಕಲೇಶಪುರ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ನಗರವಾಸಿಗಳು ಹಲವು ಬಾರಿ ಪುರಸಭೆಗೆ ದೂರು ನೀಡಿದ್ದಾರೆ. ಆದರೆ, ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿರುವ ಪುರಸಭೆಯ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಬೀದಿ ನಾಯಿಗಳಿಗೆ ಕಡಿವಾಣ ಹಾಕದಿದ್ದರೆ ಇಂತಹ ಘಟನೆಗಳು ಮುಂದೆಯೂ ಸಂಭವಿಸುವ ಸಾಧ್ಯತೆ ಇದೆ,” ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಪುರಸಭೆಯ ನಿರ್ಲಕ್ಷ್ಯದ ವಿರುದ್ಧ ತ್ವರಿತ ಕ್ರಮ ಕೈಗೊಳ್ಳುವಂತೆ ಮತ್ತು ಬೀದಿ ನಾಯಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.