ಶಾಂತಿಗ್ರಾಮ ಬಳಿ ಭೀಕರ ಅಪಘಾತ: ಮೂವರು ಸ್ಕೂಟರ್ ಸವಾರರ ಬಲಿ ಪಡೆದ ಬೊಲೆರೋ ಪಿಕಪ್

ಹಾಸನ: ಟಿವಿಎಸ್ ಜ್ಯುಪಿಟರ್ ಸ್ಕೂಟರ್ ಗೆ ಬೊಲೆರೋ ಪಿಕಪ್ ವಾಹನ ಡಿಕ್ಕಿಯಾಗಿ ಸ್ಕೂಟರ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಹಾಸನ ತಾಲೂಕಿನ ಶಾಂತಿಗ್ರಾಮ ಬಳಿ ನಡೆದಿದೆ.

ಅಪಘಾತದಲ್ಲಿ ಮೃತರಾದವರ ಗುರುತು ಪತ್ತೆಯಾಗಿಲ್ಲ. ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸ್ಕೂಟರ್ ಗೆ ಡಿಕ್ಕಿ ಹೊಡೆದ ಪಿಕಪ್, ರಸ್ತೆ ಬದಿಯ ರೈತರ ಜಮೀನಿಗೆ ನುಗ್ಗಿದೆ. ಸ್ಕೂಟರ್ ಸವಾರನೊಬ್ಬನ ಮೃತದೇಹ ಪಿಕಪ್ ಚಕ್ರಕ್ಕೆ ಸಿಲುಕಿ ನುಜ್ಜುಗುಜ್ಜಾಗಿದ್ದು ದಾರಿ ಹೋಕರು ವಾಹನವನ್ನು ತಳ್ಳಿ ಪಕ್ಕಕ್ಕೆ ಸರಿಸಿ ಶವ ಹೊರತೆಗೆದರು.

ಶಾಂತಿಗ್ರಾಮ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.