ವಿವಿಧ ಪ್ರಕರಣ : 8.43 ಲಕ್ಷ ಮೌಲ್ಯದ ಚಿನ್ನಾಭರಣ, ಹಣ ಕಳವು

ಹಾಸನ : ಜಿಲ್ಲೆಯ ಗಂಡಸಿ, ಅರಸೀಕೆರೆ ಗ್ರಾಮಾಂತರ ಹಾಗು ಹಾಸನ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ಪ್ರಕರಣದಲ್ಲಿ ನಗದು ಸೇರಿ 8.43 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಪ್ರಕರಣ ನಡೆದಿದೆ.

ದಂಪತಿ ಮನೆಯಲ್ಲಿದ್ದ ಸಮಯದಲ್ಲೇ ಹಿಂಬಾಗಿಲಿನಿಂದ ಬಂದ ಕಳ್ಳರು 1.42 ಲಕ್ಷ ರೂ. ಮೌಲ್ಯದ ಚಿನ್ನದ ಸರ ಹಾಗು ಮೊಬೈಲ್‌ ಕದ್ದಿರುವ ಘಟನೆ ಅರಸೀಕೆರೆ ತಾಲ್ಲೂಕು ಆಲದಹಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಸಂತೋಷ ಮತ್ತು ಪೂಜಾ ಎಂಬುವವರು ಊಟ ಮಾಡಿ ಮಲಗಿದ್ದಾಗ ರಾತ್ರಿ 2.30ರ ಸಮಯದಲ್ಲಿ ಮನೆಯೊಳಗೆ ಯಾರೋ ಟಾರ್ಚ್‌ ಆನ್‌ ಮಾಡಿದಂತೆ ಅನಿಸಿದ್ದು ತಕ್ಷಣವೇ ಎದ್ದು ನೋಡಿದಾಗ ಯಾರೂ ಕಾಣಿಸಿಲ್ಲ.

ಡ್ರೆಸ್ಸಿಂಗ್‌ ಟೇಬಲ್‌ ಮೇಲಿಟ್ಟಿದ್ದ ಮೇಕಪ್‌ ಬಾಕ್‌್ಸ ನಾಪತ್ತೆಯಾಗಿದ್ದು ಕಳ್ಳರು ಬಂದಿರುವುದು ಗೊತ್ತಾಗಿದೆ. ಹಿಂಬಾಗಿಲ ಬೀಗ ಮುರಿದು ಒಳನುಗ್ಗಿರುವ ಕಳ್ಳರು ಯಾರಿಗೂ ಗೊತ್ತಾಗದಂತೆ 30 ಗ್ರಾಂ ತೂಕದ ಚಿನ್ನದ ಸರ ಅಪಹರಿಸಿದ್ದಾರೆ. ಗಂಡಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶುಂಠಿ ಹಣ ಕಳ್ಳರ ಪಾಲು: ಬೀರುವಿನಲ್ಲಿಟ್ಟಿದ್ದ 3.50 ಲಕ್ಷ ರೂ. ಹಣ ಹಾಗು 2 ಲಕ್ಷ ರೂ. ಬೆಲೆಯ ಚಿನ್ನಾಭರಣ ಕದ್ದಿರುವ ಘಟನೆ ಅರಸೀಕೆರೆ ತಾಲ್ಲೂಕು ಅಣ್ಣನಾಯಕನಹಳ್ಳಿ ಗ್ರಾಮದ ಮಂಜುನಾಥ್‌ ಎಂಬುವವರ ಮನೆಯಲ್ಲಿ ನಡೆದಿದೆ.

ಶುಂಠಿ ಮಾರಾಟದಿಂದ ಬಂದಿದ್ದ 3.50 ಲಕ್ಷ ರೂ.ಗಳನ್ನು ಮನೆಯ ಬೀರುವಿನಲ್ಲಿಟ್ಟಿದ್ದ ಮಂಜುನಾಥ್‌ ಅವರು ನ. 2ರಂದು ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಸಾತೇನಹಳ್ಳಿಯ ತೋಟದ ಮನೆಗೆ ತೆರಳಿದ್ದರು. ನ. 5ರಂದು ಮನೆಗೆ ಬಂದು ನೋಡಿದಾಗ ಕಳುವಾಗಿರುವುದು ತಿಳಿದಿದೆ. ಹಣ ಮಾತ್ರವಲ್ಲದೆ 16 ಗ್ರಾಂ ತೂಕದ ಚಿನ್ನದ ಸರ, 25 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಳುವಾಗಿದೆ. ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

1.45 ಲಕ್ಷ ರೂ. ಬೆಲೆಯ ಆಭರಣ ಕಳವು:
ಮನೆಯ ಡೋರ್‌ಲಾಕ್‌ ಮುರಿದು ಬೀರುವಿನಲ್ಲಿಟ್ಟಿದ್ದ 1.45 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳುವಾಗಿರುವ ಘಟನೆ ಹಾಸನದ ಬಸವೇಶ್ವರ ನಗರದ ಪೂರ್ಣಿಮಾ ಎಂಬುವವರ ಮನೆಯಲ್ಲಿ ನಡೆದಿದೆ.

ಪತಿ ಶಿವಕುಮಾರ್‌ಗೆ ಅನಾರೋಗ್ಯ ಹಿನ್ನಲೆಯಲ್ಲಿ ಪೂರ್ಣಿಮಾ ಅವರು ಅ. 30 ರಂದು ಬೆಂಗಳೂರಿನ ಮಗಳ ಮನೆಗೆ ತೆರಳಿದ್ದರು. ನ. 5 ರಂದು ವಾಪಾಸ್‌‍ ಬಂದು ನೋಡಿದಾಗ ಕಳ್ಳತನ ವಿಚಾರ ತಿಳಿದಿದೆ. ಮನೆಯ ಡೋರ್‌ಲಾಕ್‌ ಮುರಿದು ಒಳನುಗ್ಗಿರುವ ಕಳ್ಳರು ಬೀರುವಿನಲ್ಲಿಟ್ಟಿದ್ದ 12 ಗ್ರಾಂ ತೂಕದ ಚಿನ್ನದ ಸರ, 3 ಗ್ರಾಂ ತೂಕದ ಚಿನ್ನದ ಉಂಗುರ, 4 ಗ್ರಾಂ ತೂಕದ ಚಿನ್ನದ ಓಲೆ, 4 ಗ್ರಾಂ ತೂಕದ ಚಿನ್ನದ ಗಣಪತಿ ಡಾಲರ್‌, 4 ಗ್ರಾಂ ತೂಕದ ಚಿನ್ನದ ಪ್ಲೇನ್‌ ಡಾಲರ್‌, 50 ಗ್ರಾಂ ತೂಕದ ಬೆಳ್ಳಿಯ ಕುಂಕುಮ ಬಟ್ಟಲು, 50 ಗ್ರಾಂ ತೂಕದ ಬೆಳ್ಳಿ ಪಂಚಪತ್ರೆ, 250 ಗ್ರಾಂ ತೂಕದ ಬೆಳ್ಳಿ ತಟ್ಟೆ, 100 ಗ್ರಾಂ ತೂಕದ ಬೆಳ್ಳಿ ದೀಪದ ಕಂಬ, 100 ಗ್ರಾಂ ತೂಕದ ಚಿಕ್ಕಚಿಕ್ಕ ಬೆಳ್ಳಿ ಕುಂಕುಮದ ಬಟ್ಟಲುಗಳನ್ನು ಕಳವು ಮಾಡಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.