ಹಾಸನದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಯಾವಾಕಿ ಅರಣ್ಯ ನಿರ್ಮಾಣಕ್ಕೆ ಚಾಲನೆ

ಹಸಿರುಭೂಮಿ ಪ್ರತಿಷ್ಠಾನದಿಂದ ಯೋಜನೆ ಅನುಷ್ಠಾನ

ಹಾಸನ: ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಹಸಿರು ಭೂಮಿ ಪ್ರತಿಷ್ಠಾನ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಮಿಯಾವಾಕಿ ಮಾದರಿ ಪುಟ್ಟಡವಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿ 550 ಸಸಿಗಳನ್ನು ನೆಡಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಜಿ. ಕೆ. ದಾಕ್ಷಾಯಿಣಿ, ಪರಿಸರದ ಸಮತೋಲನ ಕಾಯ್ದುಕೊಳ್ಳುವುದು ಬಹಳ ಮುಖ್ಯವಾಗಿದೆ. ಜಾಗತಿಕ ತಾಪಮಾನ ಹೆಚ್ಚಳದಿಂದ ಜಗತ್ತನ್ನು ರಕ್ಷಿಸಲು ಹೆಚ್ಚು ಹೆಚ್ಚು ಗಿಡಗಳು ನೆಡಬೇಕು. ಈ ನಿಟ್ಟಿನಲ್ಲಿ ಹಸಿರುಭೂಮಿ ಪ್ರತಿಷ್ಠಾನ ಪರಿಸರವನ್ನು ಸರಿದೂಗಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಎರಡು ಪುಟ್ಟ ಅಡವಿಗಳನ್ನು ಕಾಲೇಜು ಆವರಣದಲ್ಲಿ ನಿರ್ಮಿಸಿಲು ಚಾಲನೆ ನೀಡಿದ್ದು,ಆ ಗಿಡಗಳನ್ನು ವಿದ್ಯಾರ್ಥಿಗಳು ಅತ್ಯಂತ ಪ್ರೀತಿಪೂರ್ವಕವಾಗಿ ರಕ್ಷಣೆ ಮಾಡಿ ಪರಿಸರದ ಋಣವನ್ನು ತೀರಿಸಬೇಕು ಎಂದು ಕರೆ ನೀಡಿದರು.

ಹಸಿರು ಭೂಮಿ ಪ್ರತಿಷ್ಠಾನದ ಖಜಾಂಚಿ ಎಂ.ಬಿ. ಗಿರಿಜಾಂಬಿಕ ಮಾತನಾಡಿ, ಮಿಯಾವಾಕಿ ಅರಣ್ಯ ಜಪಾನ್ ಮಾದರಿಯಾಗಿದೆ. ಕಡಿಮೆ ಸ್ಥಳದಲ್ಲಿ ಹೆಚ್ಚು ಸಂಖ್ಯೆಯ ಗಿಡಗಳನ್ನು ನೆಡುವುದರ ಮೂಲಕ ಆಮ್ಲಜನಕ ಉತ್ಪತ್ತಿ ಹೆಚ್ಚಿಸಲಾಗುತ್ತದೆ. ತಾಪಮಾನವೂ ಕಡಿಮೆಯಾಗುವುದು ಜತೆಗೆ ಜೀವ ವೈವಿಧ್ಯತೆ ರಕ್ಷಣೆಯಾಗಯತ್ತದೆ. ಆ ನಿಟ್ಟಿನಲ್ಲಿ ಪ್ರಸಕ್ತ ಸಾಲಿನಲ್ಲಿ ಹಸಿರು ಭೂಮಿ ಪ್ರತಿಷ್ಠಾನವು ಈಗಾಗಲೇ ನಗರದ ಹಲವು ಕಡೆ ಆರು ಮಿಯವಾಕಿ ಅರಣ್ಯಗಳನ್ನು ನಿರ್ಮಿಸಲು ಚಾಲನೆ ನೀಡಿದೆ ಎಂದರು.

ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಎನ್. ಎಸ್. ಎಸ್. ಅಧಿಕಾರಿ ಡಾ. ತಿಮ್ಮೇಶ್ ಮಾತನಾಡಿದರು. ಹಸಿರು ಭೂಮಿ ಪ್ರತಿಷ್ಠಾನದ ಮಿಯಾವಾಕಿ ಸಂಚಾಲಕ ವೆಂಕಟೇಗೌಡ, ಹಸಿರು ಸಿರಿಯ ಸಂಚಾಲಕ ಪುರುಷೋತ್ತಮ್, ಕಾರ್ಯದರ್ಶಿ ಮಂಜುನಾಥ್, ಟ್ರಸ್ಟಿ ಭವಾನಿ ,ಆಂದೋಲನದ ಸದಸ್ಯ ಆಡಿಟರ್ ದಿನೇಶ್ ಕುಮಾರ್, ಸಂಗೀತ ಶೆಣೈ, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.