ಹಾಸನ: ಮಾರಾಣಾಂತಿಕ ಹಲ್ಲೆ ನಡೆಸಿ ತಮ್ಮನನ್ನು ಕೊಲೆ ಮಾಡಿದ್ದ ಅಣ್ಣನಿಗೆ 5 ವರ್ಷಗಳ ಕಠಿಣ ಸಜೆ ಹಾಗೂ ರೂ. 20,000 ದಂಡ ವಿಧಿಸಿ ಹಾಸನದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಅರಕಲಗೂಡು ತಾಲೂಕಿನ ಕರೀಂ ಶಿಕ್ಷೆಗೆ ಒಳಗಾದ ಅಪರಾಧಿ. ಈತ 2017ರ ಫೆಬ್ರವರಿ 12 ರಂದು ತನ್ನ ಮನೆ ಹಿಂದಿನ ಲಂಟಾನದ ಬೇಲಿ ಕಡಿಯುತ್ತಿದ್ದದ್ದನ್ನು ಪ್ರಶ್ನಿಸಿದ ಕಿರಿಯ ಸಹೋದರ ಅಬ್ದುಲ್ ದಸ್ತಗೀರ್ ಜತೆ ಜಗಳ ಮಾಡಿ ಕುಡುಗೋಲಿನಿಂದ ಹಲ್ಲೆ ನಡೆಸಿದ್ದನು.
ಎಡಭಾಗದ ಎದೆಗೆ ಕುಡುಗೋಲಿನ ಪೆಟ್ಟು ಬಿದ್ದಿದ್ದರಿಂದ ಮಾರಣಾಂತಿಕ ಗಾಯಗಳಾಗಿದ್ದವು. ಆತನಿಗೆ ಕೊಣನೂರು, ಅರಕಲಗೂಡು ಹಾಗೂ ಹಾಸನದ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಮನೆಯಲ್ಲಿಯೇ ಶುಶ್ರೂಷೆಯಲ್ಲಿದ್ದ ಅವರು ಗಾಯ ವಾಸಿಯಾಗದೇ ಮೃತಪಟ್ಟಿದ್ದರು.
ಈ ಸಂಬಂಧ ಐಪಿಸಿ ಕಲಂ 143, 147, 148, 323, 504, 302 ರೆ/ವಿ 149 ರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಕೊಣನೂರು ಠಾಣೆ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರಾಪಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಹಾಸನದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಎಸ್.ಎ. ಹಿದಾಯತ್ ಉಲ್ಲಾ ಷರೀಫ್ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿ ಶುಕ್ರವಾರ ತೀರ್ಪು ಪ್ರಕಟಿಸಿದರು. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ (ಸರ್ಕಾರಿ ಅಭಿಯೋಜಕರು) ಕೆ.ಎಸ್. ನಾಗೇಂದ್ರ ವಾದ ಮಂಡಿಸಿದ್ದರು.