ಹಾಸನ-ಮಂಗಳೂರು ರೈಲು ಮಾರ್ಗದ ಮೇಲೆ ಮತ್ತೆ ಗುಡ್ಡಕುಸಿತ; ಮಧ್ಯರಾತ್ರಿಯಿಂದ ರೈಲುಗಳಲ್ಲಿ ಕುಳಿತ ಸಾವಿರಾರು ಪ್ರಯಾಣಿಕರ ಪರದಾಟ

ಮಾರ್ಗಮಧ್ಯದ ಅರು ನಿಲ್ದಾಣಗಳಲ್ಲಿ ನಿಂತಿರುವ ಆರು ರೈಲುಗಳು| ಮಣ್ಣು ತೆರವು ಕಾರ್ಯಾಚರಣೆ ಆರಂಭ

ಹಾಸನ: ಮಂಗಳೂರು-ಹಾಸನ ಮಾರ್ಗದ ಸಕಲೇಶಪುರ ತಾಲೂಕು ಆಚಂಗಿ ಬಳಿ ರೈಲ್ವೆ ಹಳಿ ಮೇಲೆ ಶುಕ್ರವಾರ ರಾತ್ರಿ ಮತ್ತೆ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದು ರೈಲು ಪ್ರಯಾಣ ಸ್ಥಗಿತಗೊಂಡಿದ್ದು ಸಾವಿರಾರು ಪ್ರಯಾಣಿಕರು ಮಾರ್ಗಮಧ್ಯದಲ್ಲಿ ಸಿಲುಕಿ ಪರದಾಡುತ್ತಿದ್ದಾರೆ.

ಹಾಸನ-ಮಂಗಳೂರು ಮಾರ್ಗದ ಕಿಲೋಮೀಟರ್ 42/43 ರ ಮಧ್ಯೆ ಭೂಕುಸಿತಮರಗಳ ಸಮೇತವಾಗಿ ರೈಲ್ವೆ ಹಳಿ ಮೇಲೆ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದಿದೆ.

ಹಾಸನದಿಂದ ಮಂಗಳೂರಿಗೆ, ಮಂಗಳೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ರೈಲುಗಳ ಸಂಚಾರ ಸ್ಥಗಿತಗೊಂಡಿದೆ. ಪ್ರಯಾಣ ಆರಂಭಿಸಿದ್ದ ಆರು ರೈಲುಗಳನ್ನು ಸಕಲೇಶಪುರ, ಯಡಕುಮರಿ, ಶಿರವಾಗಿಲು, ಆಲೂರು ಸೇರಿ ಆರು ನಿಲ್ದಾಣಗಳಲ್ಲಿ ನಿಲ್ಲಿಸಲಾಗಿದೆ.

ದಿಢೀರ್ ರೈಲುಗಳು ಸ್ಥಗಿತಗೊಂಡಿದ್ದರಿಂದ ರೈಲಿನಲ್ಲಿ ಕುಳಿತಿರುವ ಸಾವಿರಾರು ಪ್ರಯಾಣಿಕರು ಮಧ್ಯರಾತ್ರಿಯಿಂದ ಪ್ರಯಾಣದ ಅನಿಶ್ಚಿತತೆಗೆ ಸಿಲುಕಿ ಪರದಾಡುತ್ತಿದ್ದಾರೆ. ಪರ್ಯಾಯ ವಾಹನ ವ್ಯವಸ್ಥೆ ಮಾಡುವಂತೆ ಅವರು ಒತ್ತಾಯಿಸುತ್ತಿದ್ದಾರೆ.

ರೈಲ್ವೆ ಇಲಾಖೆ ಕಾರ್ಮಿಕರು ಮಣ್ಣು ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ.