ಹಾಸನ: ಸಾಲುಮರದ ತಿಮ್ಮಕ್ಕ ಇಂಟರ್ ನ್ಯಾಷನಲ್ ಫೌಂಡೇಶನ್ ಕೊಡಮಾಡುವ 2024ನೇ ಸಾಲಿನ ಗ್ರೀನರಿ ಅವಾರ್ಡ್ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 15 ಮಂದಿ ಗಣ್ಯರು ಆಯ್ಕೆ ಆಗಿದ್ದಾರೆ.
ಈ ಪೈಕಿ ಹಾಸನದಿಂದ ರವಿ ನಾಕಲಗೂಡು(ಪತ್ರಿಕೋದ್ಯಮ), ಬೇಲೂರು ತಹಸೀಲ್ದಾರ್ ಮಮತಾ ಎಂ.(ಸಾರ್ವಜನಿಕ ಕ್ಷೇತ್ರ) ಮತ್ತು ಸಿ.ಎಂ.ಲಿಂಗರಾಜು ಬೇಲೂರು (ಸಮಾಜ ಸೇವೆ) ಸೇರಿದ್ದಾರೆ. ಕಾರ್ಯಕ್ರಮದ ಸರ್ವಾಧ್ಯಕ್ಷರಾದ ಗೃಹ ಸಚಿವರೂ ಆದ ಡಾ.ಜಿ.ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಾಧಕರ ಆಯ್ಕೆ ನಡೆದಿದೆ.
ಸೆ.೨೬ ರಂದು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆಯುವ ವೃಕ್ಷಮಾತೆ, ನಾಡೋಜ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ. ಸಾಲುಮರದ ತಿಮ್ಮಕ್ಕ ಅವರ ೧೧೩ನೇ ಜನ್ಮದಿನ ಹಾಗೂ ಅಭಿನಂದನಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಜೊತೆಗೆ ೧೦ ಸಾವಿರ ನಗದು, ಬೆಳ್ಳಿ ಪದಕ, ಪ್ರಶಸ್ತಿ ಫಲಕ ಹಾಗೂ ಸ್ಮರಣಿಕೆ ಇರಲಿದೆ.